ನನ್ನನ್ನು ನೋಡುವುದೆಂದರೆ ಪತ್ನಿಗೆ ತುಂಬಾ ಇಷ್ಟ : ಸುಬ್ರಹ್ಮಣ್ಯನ್ ಹೇಳಿಕೆಗೆ ಆದರ್ ಪೂನಾವಾಲಾ ತಿರುಗೇಟು
ಹೊಸದಿಲ್ಲಿ: ನನ್ನ ಹೆಂಡತಿ ಕೂಡ ನಾನು ಅದ್ಭುತ ಎಂದು ಭಾವಿಸುತ್ತಾಳೆ, ಅವಳು ರವಿವಾರದಂದು ನನ್ನನ್ನು ನೋಡುವುದೆಂದರೆ ಪತ್ನಿಗೆ ತುಂಬಾ ಇಷ್ಟ. ಯಾವಾಗಲೂ ಕೆಲಸ ಮತ್ತು ಜೀವನದ ನಡುವೆ ಸಮತೋಲನ ಮುಖ್ಯ ಎಂದು ಎಲ್ ಅಂಡ್ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ ಆದರ್ ಪೂನಾವಾಲಾ ಹೇಳಿದ್ದಾರೆ.
ಎಲ್ ಅಂಡ್ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಇತ್ತೀಚೆಗೆ ಮಾತನಾಡುತ್ತಾ, 90 ಗಂಟೆಗಳ ಕಾಲ ಕೆಲಸ ಮಾಡಬೇಕು. ನೀವು ಎಷ್ಟು ಸಮಯ ನಿಮ್ಮ ಪತ್ನಿಯ ಮುಖ ನೋಡಲು ಸಾಧ್ಯ? ಉದ್ಯೋಗಿಗಳು ಮನೆಯಲ್ಲಿ ಕಡಿಮೆ ಸಮಯ ಕಳೆಯಬೇಕು. ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ರವಿವಾರವನ್ನು ಕೆಲಸದ ದಿನಗಳೆಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದರೆ, ಉದ್ಯೋಗಿಗಳು ರವಿವಾರ ಕರ್ತವ್ಯಕ್ಕೆ ಹಾಜರಾದರೆ ನನಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಹೇಳಿಕೆ ನೀಡಿದ್ದರು.
ಕೆಲಸದ ಸಮಯದಲ್ಲಿ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದರು. ಇದೀಗ ಅವರ ನಿಲುವನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಬೆಂಬಲಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆದರ್ ಪೂನಾವಾಲಾ, ಹೌದು (ಆನಂದ್ ಮಹೀಂದ್ರ), ನನ್ನ ಹೆಂಡತಿ (ನತಾಶಾ ಪೂನಾವಾಲಾ) ಕೂಡ ನಾನು ಅದ್ಭುತ ಎಂದು ಭಾವಿಸುತ್ತಾರೆ, ಅವರು ರವಿವಾರದಂದು ನನ್ನನ್ನು ನೋಡುವುದನ್ನು ಇಷ್ಟಪಡುತ್ತಾರೆ. ಯಾವಾಗಲೂ ಪ್ರಮಾಣಕ್ಕಿಂತ ಕೆಲಸದ ಗುಣಮಟ್ಟ ಮುಖ್ಯ. ಕೆಲಸ ಮತ್ತು ಜೀವನದ ನಡುವೆ ಸಮತೋಲನ ಇರಬೇಕು ಎಂದು ಹೇಳಿದ್ದಾರೆ.