ಅತ್ಯಧಿಕ ಸಂಚಾರದಟ್ಟಣೆ : ದೇಶದಲ್ಲಿ ಕೋಲ್ಕತಾ ನಂ.1
ಕೋಲ್ಕತಾ: ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾ ಭಾರತದ ಅತ್ಯಂತ ವಾಹಸಂಚಾರದಟ್ಟಣೆಯ ನಗರವೆನಿಸಿದ್ದು, ಬೆಂಗಳೂರು ನಗರವನ್ನು ಹಿಂದಿಕ್ಕಿದೆ. ಅಲ್ಲದೆ ಕೋಲ್ಕತಾವು ಕೊಲಂಬಿಯಾ ದೇಶದ ಬಾರಾಂಕ್ವಿಲ್ಲಾ ಬಳಿಕ ಜಗತ್ತಿನ ಎರಡನೆ ಅತ್ಯಂತ ನಿಧಾನಗತಿಯ ವಾಹನಸಂಚಾರವಿರುವ ನಗರ ಕೂಡಾ ಆಗಿದೆಯೆಂದು 2024ರ ಟಾಮ್ ಟಾಮ್ ವಾಹನ ಸಂಚಾರ ಸೂಚ್ಯಂಕವು ತಿಳಿಸಿದೆ.
ಪುಣೆಯಂತಹ ಇತರ ಭಾರತೀಯ ನಗರಗಳು ಕೂಡಾ ಅಧಿಕ ವಾಹನ ದಟ್ಟಣೆಯಿರುವ ಜಗತ್ತಿನ ಇತರ ನಗರಗಳ ಸಾಲಿಗೆ ಸೇರ್ಪಡೆಗೊಂಡಿವೆ.
ಅತ್ಯಧಿಕ ವಾಹನದಟ್ಟಣೆೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಹಾಗೂ ಪುಣೆ ಕ್ರಮವಾಗಿ ಮೂರು ಹಾಗೂ ನಾಲ್ಕನೆ ಸ್ಥಾನದಲ್ಲಿವೆ. ಡಚ್ ತಂತ್ರಜ್ಞಾನ ಸಂಸ್ಥೆ ಟಾಮ್ ಟಾಮ್ ವಾರ್ಷಿಕವಾಗಿ ಜಗತ್ತಿನಾದ್ಯಂತದ ಪ್ರಮುಖ ನಗರಗಳಲ್ಲಿ ವಾಹನಸಂಚಾರ ಪರಿಸ್ಥಿತಿಯ ಮೌಲ್ಯಮಾಪನವನ್ನು ನಡೆಸುತ್ತದೆ.
ಕೋಲ್ಕತಾ ಮಹಾನಗರದಲ್ಲಿ ವಾಹನಗಳ ಸರಾಸರಿ ವೇಗವು ತಾಸಿಗೆ 17.4 ಕಿ.ಮೀ. ಆಗಿದ್ದು, ಅಲ್ಲಿ ವಾಹನಗಳು 10 ಕಿ.ಮೀ.ಗಳನ್ನು ಕ್ರಮಿಸಲು 34 ನಿಮಿಷಗಳು 33 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟೇ ದೂರದ ಪ್ರಯಾಣವನ್ನು ಪೂರ್ಣಗೊಳಿಸಲು ಬೆಂಗಳೂರಿನಲ್ಲಿ ಚಾಲಕರು 34 ನಿಮಿಷಗಳು ಹಾಗೂ 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ. ಪುಣೆಯಲ್ಲಿ ವಾಹನ ಸವಾರರು 33 ನಿಮಿಷಗಳು ಹಾಗೂ 22 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ.
ಕೊಲಂಬಿಯಾ ದೇಶದ ಬಾರಾಂಕ್ವಿಲ್ಲಾ ನಗರವು ಅತ್ಯಂತ ಕಡಿಮೆ ಮಟ್ಟದ ವಾಹನವೇಗವನ್ನು ಹೊಂದಿರುವ ನಗರವೆನಿಸಿದೆ. ಬರಾಂಕ್ವಿಲಾದಲ್ಲಿ ಚಾಲಕರು ತಾಸಿಗೆ ಸರಾಸರಿ 10.3 ಮೈಲು ವೇಗದಲ್ಲಿ ಪ್ರಯಾಣಿಸುತ್ತಾರೆ. 10 ಕಿ.ಮೀ. ಪ್ರಯಾಣವನ್ನು ಪೂರ್ಣಗೊಳಿಸಲು ಅವರು 36 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ.
ಜಾಗತಿಕವಾಗಿ ಸರಾಸರಿ ಅತ್ಯಂತ ನಿಧಾನ ವಾಹನಸಂಚಾರ ವೇಗವಿರುವ ಟಾಪ್ 5 ನಗರಗಳ ಪಟ್ಟಿಯಲ್ಲಿಭಾರತದ ಮೂರು ನಗರಗಳಾದ ಕೋಲ್ಕತಾ, ಬೆಂಗಳೂರು ಹಾಗೂ ಪುಣೆ ಸ್ಥಾನವನ್ನು ಪಡೆದುಕೊಂಡಿವೆ. ಈ ಪಟ್ಟಿಗೆ ಸೇರ್ಪಡೆಗೊಂಡಿರುವ ಏಕೈಕ ಯುರೋಪಿಯನ್ ನಗರವಾದ ಲಂಡನ್ ಐದನೇ ಸ್ಥಾನದಲ್ಲಿದೆ.
ಹೈದರಾಬಾದ್ ಚೆನ್ನೈ ಹಾಗೂ ಮುಂಬೈ ನಗರಗಳು ಭಾರತದ ಅತ್ಯಧಿಕ ವಾಹನದಟ್ಟಣೆಯ ಇತರ ಮೂರು ನಗರಗಳಾಗಿವೆ. ಇಲ್ಲಿ ವಾಹನಗಳ ಸರಾಸರಿ ಪ್ರಯಾಣ ಸಮಯವು 10 ಕಿ.ಮೀ.ಗೆ ಕ್ರಮವಾಗಿ 32 ನಿಮಿಷಗಳು, 30 ನಿಮಿಷಗಳು ಹಾಗೂ 29 ನಿಮಿಷಗಳಾಗಿವೆ.
ಅಹ್ಮದಾಬಾದ್, ಎರ್ನಾಕುಲಂ ಹಾಗೂ ಜೈಪುರ ಕೂಡಾ ಅತ್ಯಂತ ನಿಧಾನ ವಾಹನಸಂಚಾರವಿರುವ ನಗರಗಳ ಪಟ್ಟಿಯಲ್ಲಿವೆೆ. ನಿಧಾನಗತಿಯ ಸಂಚಾರದಲ್ಲಿ ಎರ್ನಾಕುಲಂ ನಗರವು ಮುಂಬೈಯನ್ನು ಸರಿಗಟ್ಟಿದೆ. ಅಲ್ಲಿ ವಾಹನ ಸಂಚಾರವು ಪ್ರತಿ 10 ಕಿ.ಮೀ.ಗೆ 29 ನಿಮಿಷಗಳು ಬೇಕಾಗುತ್ತವೆ. ಈ ನಗರಗಳಿಗೆ ಹೋಲಿಸಿದರೆ ಹೊಸದಿಲ್ಲಿಯ ಪರಿಸ್ಥಿತಿ ತುಸು ಉತ್ತಮವಾಗಿದೆ. ಹೊಸದಿಲ್ಲಿಯಲ್ಲಿ 10 ಕಿ.ಮೀ.ದೂರವನ್ನು ಕ್ರಮಿಸಲು ವಾಹನಗಳು 23 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಜಗತ್ತಿನಾದ್ಯಂತ 62 ದೇಶಗಳ 500 ನಗರಗಳಾದ್ಯಂತದ 458 ಶತಕೋಟಿ ಮೈಲುಗಳ ಸರಾಸರಿ ದತ್ತಾಂಶವನ್ನು ಸಂಗ್ರಹಿಸಿ ಟಾಮ್ ಟಾಮ್ ವಾಹನಸಂಚಾರ ಸೂಚ್ಯಂಕವನ್ನು ರಚಿಸಲಾಗಿದೆ.
ಕಾಲಮೀರಿದ ಮೂಲಸೌಕರ್ಯಗಳು, ಅಸಮರ್ಪಕ ರಸ್ತೆ ಯೋಜನೆ ಹಾಗೂ ನಗರೀಕರಣದ ಹೆಚ್ಚುತ್ತಿರುವ ಬೇಡಿಕೆಗಳು ವಾಹನ ಸಂಚಾರ ದಟ್ಟಣೆಯನ್ನು ಹೆಚ್ಚಿಸಿವೆ.