ಮಣಿಪುರದ ಎರಡು ಗ್ರಾಮಗಳಲ್ಲಿ ಅಶಾಂತಿಯ ಬಳಿಕ ಕರ್ಫ್ಯೂ ಹೇರಿಕೆ
ಇಂಫಾಲ: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯ ಕೊನ್ಸಾಖುಲ್ ಮತ್ತು ಲೀಲಾನ್ ವೈಫೆಯಿ ಗ್ರಾಮಗಳಲ್ಲಿ ಅಶಾಂತಿ ತಲೆದೋರಿದ ಬಳಿಕ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಶಾಂತಿಭಂಗದ ಆತಂಕದಿಂದಾಗಿ ಮುಂದಿನ ಸೂಚನೆಯವರೆಗೆ ಇವೆರಡು ಗ್ರಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ಚಲನವಲನಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತವು ಆದೇಶದಲ್ಲಿ ತಿಳಿಸಿದೆ.
ನಾಗಾ ಪ್ರಾಬಲ್ಯದ ಕೊನ್ಸಾಖುಲ್ ಮತ್ತು ಕುಕಿ-ರೆ ಪ್ರಾಬಲ್ಯದ ಲೀಲಾನ್ ವೈಫೆಯಿ ಗ್ರಾಮಗಳ ನಡುವಿನ ಪ್ರಾದೇಶಿಕ ವಿವಾದದಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಹೊಗೆಯಾಡುತ್ತಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಜ.7ರಂದು ಕುಕಿ ಸಮುದಾಯದ ಸದಸ್ಯರು ನಾಗಾ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆಸಿದ ಬಳಿಕ ಪರಿಸ್ಥಿತಿಯು ಉಲ್ಬಣಿಸಿದೆ. ಶನಿವಾರ ಕಾಮ್ಜಾಂಗ್ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ಕಟ್ಟಿಗೆಯನ್ನು ಸಾಗಿಸಲು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಗುಂಪೊಂದು ಅಸ್ಸಾಂ ರೈಫಲ್ಸ್‌ನ ತಾತ್ಕಾಲಿಕ ಶಿಬಿರವನ್ನು ಧ್ವಂಸಗೊಳಿಸಿದೆ.
ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದವು ಮತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದವು ಎಂದು ಅನಾಮಧೇಯ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮೇ 2023ರಲ್ಲಿ ಮೈತೈ ಮತ್ತು ಕುಕಿ-ರೆ-ಹಮರ್ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಆರಂಭಗೊಂಡಾಗಿನಿಂದ ಕನಿಷ್ಠ 258 ಜನರು ಸಾವನ್ನಪ್ಪಿದ್ದು,59,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ. ನವಂಬರ್‌ನಲ್ಲಿ ರಾಜ್ಯದಲ್ಲಿ ಹಿಂಸಾಚಾರದಲ್ಲಿ ಏರಿಕೆಯಾಗಿತ್ತು.