ದಿಲ್ಲಿ ವಿಧಾನಸಭಾ ಚುನಾವಣೆ | ನಿರುದ್ಯೋಗಿ ಯುವಜನರಿಗೆ 8,500 ರೂ. ಆರ್ಥಿಕ ನೆರವು: ಕಾಂಗ್ರೆಸ್ ಭರವಸೆ

Update: 2025-01-12 15:19 GMT

PC : PTI 

ಹೊಸದಿಲ್ಲಿ: ದಿಲ್ಲಿಯಲ್ಲಿ ತಾನು ಅಧಿಕಾರಕ್ಕೆ ಬಂದರೆ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ‘ಯುವ ಉಡಾನ್ ಯೋಜನೆ’ಯಡಿ ಒಂದು ವರ್ಷದ ಅವಧಿಗೆ ಮಾಸಿಕ 8,500 ರೂ.ಗಳ ಆರ್ಥಿಕ ನೆರವನ್ನು ಒದಗಿಸುವುದಾಗಿ ಕಾಂಗ್ರೆಸ್ ರವಿವಾರ ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಭರವಸೆಯನ್ನು ಪ್ರಕಟಿಸಿದ ಕಾಂಗ್ರೆಸ್ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು, ಫಲಾನುಭವಿಗಳು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

‘ಕಂಪೆನಿ,ಫ್ಯಾಕ್ಟರಿ ಅಥವಾ ಸಂಸ್ಥೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಯುವಜನರಿಗೆ ನಾವು ಆರ್ಥಿಕ ನೆರವನ್ನು ಒದಗಿಸುತ್ತೇವೆ. ಅವರು ಕಂಪೆನಿಗಳ ಮೂಲಕ ಈ ಆರ್ಥಿಕ ನೆರವನ್ನು ಪಡೆಯುತ್ತಾರೆ. ಇದು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಪಡೆಯುವ ಯೋಜನೆಯಲ್ಲ’ ಎಂದರು.

‘ಜನರು ತಮ್ಮ ಕೌಶಲ್ಯವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ತಾವು ತರಬೇತಿಯನ್ನು ಪಡೆದಿರುವ ಕ್ಷೇತ್ರದಲ್ಲಿಯೇ ಅವರನ್ನು ತೊಡಗಿಸಲು ನಾವು ಪ್ರಯತ್ನಿಸುತ್ತೇವೆ’ ಎಂದರು.

ಕಾಂಗ್ರೆಸ್ ತಾನು ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದರೆ ‘ಜೀವನ ರಕ್ಷಾ ಯೋಜನೆ’ಯಡಿ 25 ಲ.ರೂ.ವರೆಗೆ ಉಚಿತ ಆರೋಗ್ಯ ವಿಮೆಯನ್ನು ಮತ್ತು‘ಪ್ಯಾರಿ ದೀದಿ ಯೋಜನೆ’ಯಡಿ ಮಹಿಳೆಯರಿಗೆ ಮಾಸಿಕ 2,500 ರೂ.ಆರ್ಥಿಕ ನೆರವು ಒದಗಿಸುವುದಾಗಿ ಈಗಾಗಲೇ ಭರವಸೆ ನೀಡಿದೆ.

70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ದಿಲ್ಲಿಯಲ್ಲಿ ಡಿಸೆಂಬರ್ 2013ರಿಂದ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿದೆ. ಆ ಚುನಾವಣೆಯಲ್ಲಿ 32 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗಿಂತ ನಾಲ್ಕು ಕಡಿಮೆ ಸ್ಥಾನಗಳನ್ನು ಪಡೆದಿದ್ದ ಆಪ್ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. 2015 ಮತ್ತು 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಆಪ್ ಅನುಕ್ರಮವಾಗಿ 67 ಮತ್ತು 62 ಸ್ಥಾನಗಳನ್ನು ಗಳಿಸಿದ್ದರೆ, ತನ್ನ ಖಾತೆಯನ್ನು ತೆರೆಯಲೂ ಕಾಂಗ್ರೆಸ್ ವಿಫಲಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News