ಲಾಸ್ ಏಂಜಲೀಸ್ ಕಾಡ್ಗಿಚ್ಚು: ಮೃತರ ಸಂಖ್ಯೆ 16ಕ್ಕೆ ಏರಿಕೆ
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಹತೋಟಿಗೆ ಬಾರದ ಕಾಡ್ಗಿಚ್ಚಿನಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿರುವುದಾಗಿ ನಗರದ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.
ಕಾಡ್ಗಿಚ್ಚಿನಿಂದ 11 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕವಾಗಿ ವರದಿಯಾಗಿತ್ತು. ಆದರೆ ಶ್ವಾನದಳದ ಶೋಧ ಕಾರ್ಯಾಚರಣೆಯಲ್ಲಿ ಮತ್ತೆ 5 ಮೃತದೇಹ ಪತ್ತೆಯಾಗಿದೆ. ಇನ್ನೂ ಹಲವರು ನಾಪತ್ತೆಯಾಗಿರುವ ವರದಿಗಳಿವೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಕ್ಯಾಲಿಫೋರ್ನಿಯಾ ರಾಜ್ಯದ ಹಲವೆಡೆ ಮುಂದಿನ ದಿನಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಗತ್‍ಪ್ರಸಿದ್ಧ ಜೆ.ಪಾಲ್ ಗೆಟ್ಟಿ ಮ್ಯೂಸಿಯಂ ಮತ್ತು ಕ್ಯಾಲಿಫೋರ್ನಿಯಾ ವಿವಿಯತ್ತ ಕಾಡ್ಗಿಚ್ಚು ಹರಡುವುದನ್ನು ತಪ್ಪಿಸಲು ಅಗ್ನಿಶಾಮಕ ದಳ ಕಾರ್ಯಾಚರಣೆ ತೀವ್ರಗೊಳಿಸಿದೆ.
ಲಾಸ್ ಏಂಜಲೀಸ್‍ನಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಹೆಲಿಕಾಪ್ಟರ್ ಗಳಿಂದ ನೀರು ಸುರಿಸಲಾಗುತ್ತಿದೆ. ಕಾಡ್ಗಿಚ್ಚು ಅಂತರ್‍ರಾಜ್ಯ ಹೆದ್ದಾರಿ ಸಂಖ್ಯೆ 405ನ್ನು ಸಮೀಪಿಸುತ್ತಿದೆ. ಒಂದು ವೇಳೆ ಹೆದ್ದಾರಿಯನ್ನು ದಾಟಿದರೆ ಹಾಲಿವುಡ್ ಹಿಲ್ಸ್ ಮತ್ತು ಸ್ಯಾನ್ ಪೆರ್ನಾಂಡೊ ಕಣಿವೆಯಲ್ಲಿನ ಜನದಟ್ಟಣೆಯ ಪ್ರದೇಶಕ್ಕೆ ಅಪಾಯವಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ಲಾಸ್‍ಏಂಜಲೀಸ್ ನಗರದ ಉತ್ತರ ಭಾಗದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಕ್ಷಿಪ್ರಗತಿಯಲ್ಲಿ ಹರಡಿದ್ದು ಸುಮಾರು 145 ಚದರ ಕಿ.ಮೀ ಪ್ರದೇಶವನ್ನು ಸುಟ್ಟುಹಾಕಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು 12,000ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟುಹೋಗಿವೆ.