ಜನರಿಗೆ ಧರ್ಮಕ್ಕಿಂತ ಅನ್ನ ಬೇಕು ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು: ಅಖಿಲೇಶ್ ಯಾದವ್
ಲಕ್ನೊ: ದೇಶದ ಜನರಿಗೆ ಧರ್ಮಕ್ಕಿಂತ ಅನ್ನ ಬೇಕು ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು ಎಂದು ರವಿವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿರುವ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯ ಅಂಗವಾಗಿ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನಕ್ಕೆ ಧರ್ಮಕ್ಕಿಂತ ಅನ್ನ ಅಗತ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಇಂದಿನ ಕಾಲದಲ್ಲಿ ಬಡವರಿಗೆ ಧಾರ್ಮಿಕ ವಿಷಯಗಳನ್ನು ವಿವರಿಸುವುದು ತಪ್ಪಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ರಾಮಕೃಷ್ಣ ಪರಮಹಂಸರ ಶಿಷ್ಯರಾಗುವ ಮೂಲಕ ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಭಾರತವನ್ನು ಪರಿಚಯಿಸಿದರು. ಆ ಸಂದರ್ಭದಲ್ಲಿ ವಿವೇಕಾನಂದರಂತೆ ಯಾವುದೇ ಸಂತ, ಯಾವುದೇ ಗುರೂ ಕೂಡಾ ಭಾರತವನ್ನು ಪರಿಚಯಿಸಿರಲಿಲ್ಲ” ಎಂದು ಅವರು ಶ್ಲಾಘಿಸಿದರು.
ಈ ನಡುವೆ, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಖಿಲೇಶ್ ಯಾದವ್, ಬಿಜೆಪಿಯು ಮಿಲ್ಕಿಪುರ್ ವಿಧಾನಸಭಾ ಉಪ ಚುನಾವಣೆಯಲ್ಲಿ ಪರಾಭವಗೊಳ್ಳಲಿದೆ. ಹಲವಾರು ದಿನಪತ್ರಿಕೆಗಳು, ಸುದ್ದಿ ವಾಹಿನಿಗಳು ಹಾಗೂ ಮಾಧ್ಯಮಗಳು ಚುನಾವಣಾ ಸಮೀಕರಣವು ಸಮಾಜವಾದಿ ಪಕ್ಷದ ಪರವಾಗಿದೆ ಎಂದು ಹೇಳುತ್ತಿವೆ ಎಂದು ತಿಳಿಸಿದರು.