ಕೇಂದ್ರ ಬಜೆಟ್ 2025 | ಔದ್ಯಮಿಕ ಸುಧಾರಣೆಗಾಗಿ 10 ಅಂಶದ ಕಾರ್ಯಸೂಚಿಯ ಸಲಹೆ ನೀಡಿದ ಸಿಐಐ
ಹೊಸದಿಲ್ಲಿ: ನಿಯಮಗಳ ಪಾಲನೆಯ ಹೊರೆ, ಶಾಸನಾತ್ಮಕ ಚೌಕಟ್ಟಿನ ಸರಳೀಕರಣ ಹಾಗೂ ಪಾರದರ್ಶಕತೆಯ ಸುಧಾರಣೆಯನ್ನು ಗುರಿಯಾಗಿಸಿಕೊಂಡು ಔದ್ಯಮಿಕ ಸುಧಾರಣೆಗೆ ಚಾಲನೆ ನೀಡಲು ರವಿವಾರ ಕೈಗಾರಿಕೆಗಳ ಸಂಘಟನೆ ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ (CII) 10 ಅಂಶದ ಕಾರ್ಯಸೂಚಿಗಳನ್ನೊಳಗೊಂಡ ಸಲಹೆಯನ್ನು ನೀಡಿದೆ.
ತುರ್ತು ನೀತಿ ನಿರೂಪಣೆ ಮಧ್ಯಪ್ರವೇಶಗಳ ಪೈಕಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ಎಲ್ಲ ಶಾಸನಾತ್ಮಕ ಪರವಾನಗಿಗಳನ್ನು ಕಡ್ಡಾಯವಾಗಿ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಒದಗಿಸಬೇಕು ಎಂದು ಸಿಐಐ ಸಲಹೆ ನೀಡಿದೆ.
ವ್ಯಾಜ್ಯ ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನ್ಯಾಯಾಲಯಗಳ ಸಾಮರ್ಥ್ಯವನ್ನು ಸುಧಾರಿಸಬೇಕು ಹಾಗೂ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಬೇಕು ಎಂದೂ ಅದು ಪ್ರತಿಪಾದಿಸಿದೆ.
ಪರಿಸರ ನಿಯಮಗಳ ಪಾಲನೆಯನ್ನು ಸರಳಗೊಳಿಸಲು ಎಲ್ಲ ಅಗತ್ಯಗಳನ್ನು ಕೇವಲ ಒಂದೇ ದಾಖಲೆಯಲ್ಲಿ ಕ್ರೋಡೀಕರಿಸುವ ಏಕೀಕೃತ ಚೌಕಟ್ಟನ್ನು ಪರಿಚಯಿಸಬಹುದಾಗಿದೆ ಎಂದು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ ಸಲಹೆ ನೀಡಿದೆ.
ಹೊಸ ಉದ್ಯಮಗಳಿಗೆ ಸೌಕರ್ಯ ಒದಗಿಸಲು ಅಥವಾ ವಿಸ್ತರಣೆ ಮಾಡಲು ಭೂಮಿಗೆ ಸುಲಭ ಪ್ರವೇಶ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿರುವ ಸಿಐಐ, ಭೂಮಿ ಬ್ಯಾಂಕ್ ಹಾಗೂ ಸಮಗ್ರ ಭೂ ದಾಖಲೆಗಳನ್ನು ಗಣಕೀರಣ, ವ್ಯಾಜ್ಯಪೀಡಿತ ಭೂಮಿಗಳ ಬಗ್ಗೆ ಮಾಹಿತಿ ಒದಗಿಸುವಿಕೆ ಹಾಗೂ ಅಗತ್ಯ ಸುಧಾರಣೆಗಳ ಬಗ್ಗೆ ಮಾರ್ಗದರ್ಶನ ನೀಡಲು ಆನ್ ಲೈನ್ ಸಮಗ್ರ ಭೂಮಿ ಪ್ರಾಧಿಕಾರವನ್ನು ಸ್ಥಾಪಿಸಲು ರಾಜ್ಯಗಳಿಗೆ ಪ್ರೋತ್ಸಾಹ ಧನ ನೀಡಬಹುದು ಎಂದೂ ಹೇಳಿದೆ.