ಕನೌಜ್ ರೈಲು ನಿಲ್ದಾಣದಲ್ಲಿ ಛಾವಣಿ ಕುಸಿತ | ಅವಶೇಷಗಳಡಿಯಿಂದ ಎಲ್ಲಾ 28 ಕಾರ್ಮಿಕರು ಪಾರು, ರಕ್ಷಣಾ ಕಾರ್ಯಾಚರಣೆ ಮುಕ್ತಾಯ
Update: 2025-01-12 15:26 GMT
ಲಕ್ನೋ: ಉತ್ತರಪ್ರದೇಶದ ಕನೌಜ್ ರೈಲು ನಿಲ್ದಾಣದಲ್ಲಿ ನಿರ್ಮಾಣಹಂತದ ಕಟ್ಟಡದ ಛಾವಣಿ ಕುಸಿದ ಬಳಿಕ 16 ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಣಾ ಕಾರ್ಯಕರ್ತರು ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ 28 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಪಾರುಮಾಡಿದ್ದಾರೆ. ರಕ್ಷಿಸಲ್ಪಟ್ಟ ಎಲ್ಲಾ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲವೆಂದು ಮೂಲಗಳು ತಿಳಿಸಿವೆ.
ಕನೌಜ್ ರೈಲು ನಿಲ್ದಾಣದ ಆವರಣಲ್ಲಿ ನಿರ್ಮಾಣಹಂತದ ಕಟ್ಟಡದ ಛಾವಣಿಯೊಂದು ಶನಿವಾರ ಕುಸಿದು ಈ ಅವಘಡ ಸಂಭವಿಸಿತ್ತು.
ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಪಾರು ಮಾಡಲು ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟೀಯ ಹಾಗೂ ರಾಜ್ಯ ಮತ್ತು ರೈಲ್ವೆ ಇಲಾಖೆಯ ವಿಪತ್ತು ಪ್ರತಿಕ್ರಿಯಾ ಪಡೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ನಿರ್ಮಾಣಹಂತದ ಛಾವಣಿ ಕುಸಿತದ ಘಟನೆ ಬಗ್ಗೆ ತನಿಖೆ ನಡೆಸಲು ಈಶಾನ್ಯ ರೈಲ್ವೆಯು ಶನಿವಾರ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿತ್ತು.