ಉತ್ತರ ಪ್ರದೇಶ : ಹೋಳಿ ಬಣ್ಣ ಎರಚಿರುವುದಕ್ಕೆ ಆಕ್ಷೇಪ ; ವ್ಯಕ್ತಿಯ ಥಳಿಸಿ ಹತ್ಯೆ

ಸಾಂದರ್ಭಿಕ ಚಿತ್ರ | PC : NDTV
ಲಕ್ನೊ: ಹೋಳಿ ಆಚರಣೆಯ ಸಂದರ್ಭ ತನ್ನ ಮೇಲೆ ಬಣ್ಣ ಎರಚಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಉನ್ನಾವೊದಲ್ಲಿ ಶನಿವಾರ ನಡೆದಿದೆ.
ಥಳಿತದಿಂದ ಹತ್ಯೆಯಾದ ವ್ಯಕ್ತಿಯನ್ನು ಮುಹಮ್ಮದ್ ಶರೀಫ್ (48) ಎಂದು ಗುರುತಿಸಲಾಗಿದೆ. ಅವರು ಸದಾರ್‌ನಲ್ಲಿರುವ ಖಾಸಿಮ್ ನಗರ್ ರಬ್ಬನ್ನ ಮಸೀದಿಯ ಸಮೀಪದ ನಿವಾಸಿ. ಅವರು ಸೌದಿ ಅರೇಬಿಯಾದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಮನೆಗೆ ಮರಳಿದ್ದರು.
ಶನಿವಾರ ಮೊಹಲ್ಲಾ ಕಂಜಿಯಲ್ಲಿರುವ ತನ್ನ ಪೂರ್ವಜರ ಮನೆಯಿಂದ ಮಸೀದಿಗೆ ತೆರಳುತ್ತಿದ್ದ ಅವರು ಮೊಹಲ್ಲಾ ಕಾಶಿಫ್ ಅಲಿ ಸರಾಯಿ ಚುಂಗಿ ಪವರ್ ಹೌಸ್ ಸಮೀಪ ಹೋಲಿ ಆಚರಿಸುತ್ತಿದ್ದ ಗುಂಪುನ್ನು ಹಾದು ಹೋಗುತ್ತಿದ್ದರು. ಈ ಸಂದರ್ಭ ಗುಂಪು ಅವರ ಮೇಲೆ ಬಣ್ಣ ಎರಚಿದೆ. ಇದಕ್ಕೆ ಶರೀಫ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಬಣ್ಣ ಎರಚುವುದನ್ನು ಪುನರಾವರ್ತಿಸಿದ್ದಾರೆ. ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಗುಂಪು ಶರೀಫ್ ಅವರಿಗೆ ಹಲ್ಲೆ ನಡೆಸಿತು.
ಈ ಸಂದರ್ಭ ಅಲ್ಲಿದ್ದವರು ಶರೀಫ್ ಅವರನ್ನು ಗುಂಪಿನಿಂದ ರಕ್ಷಿಸಿದರು ಹಾಗೂ ಅಲ್ಲಿ ಕುಳ್ಳಿರಿಸಿ ನೀರು ನೀಡಿದರು. ಆದರೆ, ಕೆಲವೇ ಕ್ಷಣದಲ್ಲಿ ಶರೀಫ್ ಅವರು ಕುಸಿದು ಬಿದ್ದು ಮೃತಪಟ್ಟರು.
ಈ ಘಟನೆಯಿಂದ ಉನ್ನಾವೊದಲ್ಲಿ ಉದ್ವಿಗ್ನತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಇಲ್ಲಿನ ಹಲವು ಸ್ಥಳಗಳಲ್ಲಿ ಕ್ಷಿಪ್ರ ಕಾರ್ಯ ಪಡೆಯ ತಂಡ ಸೇರಿದಂತೆ ಭಾರೀ ಪೊಲೀಸರನ್ನು ನಿಯೋಜಿಸಲಾಯಿತು.
ಈ ಘಟನೆಯಿಂದ ಆಕ್ರೋಶಿತರಾದ ಇಲ್ಲಿನ ನಿವಾಸಿಗಳು ಬೀದಿಗಳಿದು ಶರೀಫ್ ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ನಗರದ ಸರ್ಕಲ್ ಅಧಿಕಾರಿ ಸೋನಮ್ ಸಿಂಗ್ ಹಾಗೂ ಶಹಾರ್ ಖಾಜಿ ನಡುವೆ ಮಾತುಕತೆ ನಡೆದ ಹೊರತಾಗಿಯೂ ಉದಿಗ್ನತೆ ಕಡಿಮೆಯಾಗಲಿಲ್ಲ.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುವುದು ದಾಳಿಕೋರರನ್ನು ಗುರುತಿಸಲು ಹಾಗೂ ಬಂಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ನಡುವೆ ಸಾಮಾಜಿಕ ಮಾದ್ಯಮದ ಪೋಸ್ಟ್‌ನಲ್ಲಿ ಉನ್ನಾವೊ ಪೊಲೀಸರು, ‘‘ಕೊಟ್ವಾಲಿ ಸದಾರ್ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವೀಡಿಯೊ ಚಿತ್ರೀಕರಿಸಿದ್ದಾರೆ. ಶರೀಫ್ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಪೊಲೀಸರು ಎಲ್ಲಾ ಆಯಾಮಗಳಿಂದ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ’’ ಎಂದಿದ್ದಾರೆ.