ನ್ಯೂ ಇಂಡಿಯಾ ಬ್ಯಾಂಕ್ ಹಗರಣ: ಆರ್ಥಿಕ ಅಪರಾಧ ಘಟಕದೆದುರು ಆರೋಪಿಯ ಶರಣಾಗತಿ

Update: 2025-03-16 21:45 IST
ನ್ಯೂ ಇಂಡಿಯಾ ಬ್ಯಾಂಕ್ ಹಗರಣ: ಆರ್ಥಿಕ ಅಪರಾಧ ಘಟಕದೆದುರು ಆರೋಪಿಯ ಶರಣಾಗತಿ
  • whatsapp icon

ಮುಂಬೈ: ನ್ಯೂ ಇಂಡಿಯಾ ಸಹಕಾರ ಬ್ಯಾಂಕ್ ನಲ್ಲಿ ನಡೆದಿದೆಯೆನ್ನಲಾದ ಬೃಹತ್ 122 ಕೋಟಿ ರೂ. ದುರ್ಬಳಕೆ ಹಗರಣದ ಸಂಬಂಧ ಪೊಲೀಸರಿಗೆ ಬೇಕಿದ್ದ ಓರ್ವ ಆರೋಪಿಯನ್ನು ಮುಂಬೈನ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ಅರುಣಾಚಲಂ ಉಲ್ಲಾಹನಾಥನ್ ಮರುತುವರ್ (62) ಎಂದು ಗುರುತಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಆತ, ರವಿವಾರ ಬೆಳಗ್ಗೆ ಮುಂಬೈನ ಆರ್ಥಿಕ ಅಪರಾಧ ದಳದ ಪೊಲೀಸರೆದುರು ಶರಣಾಗಿದ್ದಾನೆ. ಆತನನ್ನು ನ್ಯಾಯಾಲಯದೆದುರು ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ಮಾರ್ಚ್ 18ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ ಎಂದು ಆರ್ಥಿಕ ಅಪರಾಧ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ನ್ಯೂ ಇಂಡಿಯಾ ಸಹಕಾರ ಬ್ಯಾಂಕ್ ನ ಮಾಜಿ ಪ್ರಧಾನ ವ್ಯವಸ್ಥಾಪಕ ಹಾಗೂ ಲೆಕ್ಕಪತ್ರಗಳ ಮುಖ್ಯರಸ್ಥ ಹಿತೇಶ್ ಮೆಹ್ತಾರಿಂದ ಆರೋಪಿ ಅರುಣಾಚಲಂ ಸುಮಾರು 30 ಕೋಟಿ ರೂ.ವರೆಗೆ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಸ್ವೀಕರಿಸಿದ್ದಾನೆ ಎಂದು ಹೇಳಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿಯಾದ ಸಿವಿಲ್ ಗುತ್ತಿಗೆದಾರ ಕಪಿಲ್ ದೆಧಿಯನನ್ನು ಶುಕ್ರವಾರ ನೆರೆಯ ರಾಜ್ಯವಾದ ಗುಜರಾತ್ ನ ವಡೋದರದಿಂದ ಆರ್ಥಿಕ ಅಪರಾಧ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು. ಇಲ್ಲಿನ ನ್ಯಾಯಾಲಯವೊಂದು ಆತನನ್ನು ಮಾರ್ಚ್ 19ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ದುರ್ಬಳಕೆ ಮಾಡಿಕೊಂಡಿದ್ದ 12 ಕೋಟಿ ರೂ. ಮೊತ್ತವನ್ನು ಆತನ ಖಾತೆಗೆ ಜಮಾ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂ ಇಂಡಿಯಾ ಸಹಕಾರ ಬ್ಯಾಂಕ್ ನ ಪ್ರಭಾದೇವಿ ಹಾಗೂ ಮುಂಬೈನಲ್ಲಿರುವ ಗೋರೆಗಾಂವ್ ಕಚೇರಿಗಳ ಮೂಲಕ 122 ಕೋಟಿ ರೂ. ಮೊತ್ತವನ್ನು ವರ್ಗಾಯಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರು ಮಂದಿ ಆರೋಪಿಗಳಲ್ಲದೆ, ಈ ಹಗರಣ ಬೆಳಕಿಗೆ ಬರುವುದಕ್ಕೂ ಮುನ್ನ ವಿದೇಶಕ್ಕೆ ಪರಾರಿಯಾಗಿದ್ದ ಬ್ಯಾಂಕ್ ನ ಮಾಜಿ ಅಧ್ಯಕ್ಷ ಹಿರೇನ್ ಭಾನು ಹಾಗೂ ಆತನ ಪತ್ನಿ ಮತ್ತು ಬ್ಯಾಂಕ್ ನ ಮಾಜಿ ಉಪಾಧ್ಯಕ್ಷೆ ಗೌರಿ ಭಾನು ಸೇರಿದಂತೆ ಇನ್ನೂ ಹಲವರನ್ನು ಈ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಗಳು ಎಂದು ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News