ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಉತ್ತರ ಪ್ರದೇಶದ ಪ್ರೊಫೆಸರ್ ಅಮಾನತು

ಹತ್ರಾಸ್ (ಉತ್ತರ ಪ್ರದೇಶ): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬರ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ಪ್ರೊಫೆಸರ್ ಅಮಾನತುಗೊಂಡಿದ್ದಾರೆ.
ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆಯಲ್ಲಿ ಶಾಮೀಲಾದ ಬಗ್ಗೆ ಅನಾಮಧೇಯ ದೂರು ಬಂದಿರುವ ಹಿನ್ನೆಲೆಯಲ್ಲಿ ಸೇಠ್ ಪೂಲ್ಚಂದ್ ಬಗ್ಲಾ ಪಿಯು ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಪ್ರೊಫೆಸರ್ ರಜನೀಶ್ ಎಂಬುವವರ ವಿರುದ್ಧ ಮಾರ್ಚ್ 13ರಂದು ಎಫ್ಐಆರ್ ದಾಖಲಾಗಿದೆ ಎಂದು ವೃತ್ತಾಧಿಕಾರಿ ಯೋಗೇಂದ್ರ ಕೃಷ್ಣ ನಾರಾಯಣ ಹೇಳಿದ್ದಾರೆ.
ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 64(2) (ಅತ್ಯಾಚಾರ), 68 (ಅಧಿಕಾರ ಹೊಂದಿದ ವ್ಯಕ್ತಿಯಿಂದ ಸಂಭೋಗ) ಮತ್ತು 75 (ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಹಲ್ಲೆ ಅಥವಾ ಬಲಪ್ರಯೋಗ) ಅನ್ವಯ ಪ್ರಕರಣ ದಾಖಲಾಗಿದೆ. ದೂರಿನ ಬಗ್ಗೆ ವಿಸ್ತೃತ ತನಿಖೆ ನಡೆಯುತ್ತಿದ್ದು, ಅಮಾನಧೇಯ ದೂರಿನ ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಅವರು ವಿವರಿಸಿದ್ದಾರೆ.
ಎಫ್ಐಆರ್ ದಾಖಲಾದ ಬೆನ್ನಲ್ಲೇ ಕಾಲೇಜಿನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಾಗ್ಲಾ ಅವರು ಆರೋಪಿ ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿದ್ದಾರೆ. 18 ತಿಂಗಳಿಂದ ಇಂಥ ಆರೋಪಗಳು ಬರುತ್ತಿದ್ದು, ಹಲವು ವಿಚಾರಣೆಗಳು ಕೂಡಾ ನಡೆಸಿವೆ ಎಂದು ಆರೋಪಿ ಪ್ರೊಫೆಸರ್ ಹೇಳಿದ್ದಾರೆ.