ತೇಜ್ ಪ್ರತಾಪ್ ಯಾದವ್ ಸೂಚನೆಯಂತೆ ನೃತ್ಯ; ಭದ್ರತಾ ಕೆಲಸದಿಂದ ಕಾನ್ಸ್‌ಟೇಬಲ್ ತೆರವು

PC : X| @patna_press
ಪಾಟ್ನಾ: ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ನಿವಾಸದಲ್ಲಿ ಹೋಳಿ ಸಂಭ್ರಮಾಚರಣೆ ಸಂದರ್ಭ ಅವರ ಆದೇಶದಂತೆ ಸಮವಸ್ತ್ರದಲ್ಲಿ ನೃತ್ಯ ಮಾಡಿದ ಕಾನ್ಸ್‌ಟೇಬಲ್‌ನನ್ನು ಭದ್ರತಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.
ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಕಚೇರಿ ರವಿವಾರ ಜಾರಿಗೊಳಿಸಿದ ಹೇಳಿಕೆಯಲ್ಲಿ, ‘‘ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಮವಸ್ತ್ರದಲ್ಲಿದ್ದಾಗಲೇ ನೃತ್ಯ ಮಾಡಿದ್ದಾರೆ. ಆದುದರಿಂದ ಅವರನ್ನು ಭದ್ರತಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ ಹಾಗೂ ಪೊಲೀಸ್ ಪ್ರಧಾನ ಕಛೇರಿಗೆ ಕಳುಹಿಸಲಾಗಿದೆ. ತೇಜ್ ಪ್ರತಾಪ್ ಅವರ ಭದ್ರತೆಗೆ ಇನ್ನೋರ್ವ ಕಾನ್ಸ್‌ಟೆಬಲ್ ಅನ್ನು ನಿಯೋಜಿಸಲಾಗುವುದು’’ ಎಂದು ಹೇಳಿದೆ.
ತೇಜ್ ಪ್ರತಾಪ್ ಯಾದವ್ ಅವರ ಅಧಿಕೃತ ನಿವಾಸದಲ್ಲಿ ಶನಿವಾರ ಹೋಳಿ ಆಚರಿಸಲಾಯಿತು. ಈ ಸಂದರ್ಭ ತೇಜ್ ಪ್ರತಾಪ್ ಯಾದವ್ ಅವರು ಕಾನ್ಸ್‌ಟೇಬಲ್ ದೀಪಕ್ ಕುಮಾರ್‌ಗೆ ನೃತ್ಯ ಮಾಡುವಂತೆ ಆದೇಶಿಸಿದ್ದರು. ನೃತ್ಯ ಮಾಡದೇ ಇದ್ದರೆ, ಅಮಾನತುಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದರು. ಅವರ ಈ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗಿತ್ತು.
‘‘ಏ ಪೊಲೀಸ್ ದೀಪಕ್... ನಾನು ಒಂದು ಹಾಡು ಹಾಕುತ್ತೇನೆ. ನೀನು ಅದಕ್ಕೆ ನೃತ್ಯ ಮಾಡಬೇಕು. ನೀನು ನೃತ್ಯ ಮಾಡದೇ ಇದ್ದರೆ, ಅಮಾನತು ಮಾಡಲಾಗುವುದು. ಪರವಾಗಿಲ್ಲ. ಇದು ಹೋಳಿ’’ ಎಂದು ಹಾಡು ಹಾಕುವ ಮುನ್ನ ತೇಜ್ ಪ್ರತಾಪ್ ಯಾದವ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ತೇಜ್ ಪ್ರತಾಪ್ ಯಾದವ್ ಅವರ ಈ ನಡೆಗೆ ರಾಜಕೀಯ ವಲಯ, ಸಾಮಾಜಿಕ ಮಾದ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.