ಮಹಾರಾಷ್ಟ್ರ ವಿಧಾನ ಪರಿಷತ್ ಉಪಚುನಾವಣೆ: ಬಿಜೆಪಿಯ ಮೂವರು ಅಭ್ಯರ್ಥಿಗಳ ಘೋಷಣೆ

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ರಾಜ್ಯ ವಿಧಾನ ಪರಿಷತ್ತಿನ ಐದು ಸ್ಥಾನಗಳಿಗೆ ಮಾ.27ರಂದು ಉಪಚುನಾವಣೆಗಳು ನಡೆಯಲಿದ್ದು,ಬಿಜೆಪಿ ತನ್ನ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ರವಿವಾರ ಪ್ರಕಟಿಸಿದೆ.
ನವಂಬರ್ 2024ರ ವಿಧಾನಸಭಾ ಚುನಾವಣೆಗಳಲ್ಲಿ ಐವರು ಹಾಲಿ ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗಿರುವುದರಿಂದ ಉಪಚುನಾವಣೆಗಳು ಅಗತ್ಯವಾಗಿವೆ.
ವಿಧಾನಸಭೆಯನ್ನು ಪ್ರವೇಶಿಸಿದ ಐವರು ಎಂಎಲ್‌ಸಿಗಳ ಪೈಕಿ ಮೂವರು ಬಿಜೆಪಿಗೆ ಸೇರಿದ್ದು,ತಲಾ ಓರ್ವರು ಶಿವಸೇನೆ ಮತ್ತು ಎನ್‌ಸಿಪಿಗೆ ಸೇರಿದವರಾಗಿದ್ದಾರೆ. ಎಲ್ಲ ಮೂರೂ ಪಕ್ಷಗಳು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿವೆ.
ನಾಗ್ಪುರದ ಮಾಜಿ ಮೇಯರ್ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಪ್ತ ಸಂದೀಪ ದಿವಾಕರರಾವ್ ಜೋಶಿ,ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಂಜಯ ಕೃಷ್ಣರಾವ ಕೇನೆಕರ್ ಮತ್ತು ಮಾಜಿ ಶಾಸಕ ದಾದಾರಾವ್ ಯಾದವರಾವ್ ಕೆಚೆ ಅವರು ಬಿಜೆಪಿ ರವಿವಾರ ಘೋಷಿಸಿದ ಅಭ್ಯರ್ಥಿಗಳಾಗಿದ್ದಾರೆ.
ಉಪಚುನಾವಣೆಗಳಲ್ಲಿ ಶಾಸಕರು ಮತಗಳನ್ನು ಚಲಾಯಿಸಲಿದ್ದು,ರಾಜ್ಯ ವಿಧಾನಸಭೆಯು 288 ಶಾಸಕರನ್ನು ಹೊಂದಿದೆ. ಬಿಜೆಪಿ 132,ಶಿವಸೇನೆ 57 ಮತ್ತು ಎನ್‌ಸಿಪಿ 41 ಶಾಸಕರನ್ನು ಹೊಂದಿದ್ದು,ಎಲ್ಲ ಐದೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿವೆ.
ಉಪಚುನಾವಣೆಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಮಾ.17 ಕೊನೆಯ ದಿನವಾಗಿದೆ.ಮಾ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು,ಮಾ.20 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅಗತ್ಯವಾದರೆ ಮತದಾನವು ಮಾ.27ರಂದು ನಡೆಯಲಿದೆ.