ಇಂಡಿಯಾ ಮೈತ್ರಿ ವಿಸರ್ಜಿಸಲು ಶಿವಸೇನೆ ಕರೆ ನೀಡಿಲ್ಲ: ಸಂಜಯ್ ರಾವತ್ ಸ್ಪಷ್ಟನೆ

ಶಿವಸೇನಾ ನಾಯಕ ಸಂಜಯ್ ರಾವತ್ (Photo: PTI)
ಮುಂಬೈ : ಶಿವಸೇನಾ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಅಥವಾ ಮಹಾ ವಿಕಾಸ್ ಅಘಾಡಿ(ಎಂವಿಎ) ವಿಸರ್ಜನೆಗೆ ಎಂದಿಗೂ ಕರೆ ನೀಡಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುವ ಹಕ್ಕು ತಮಗೆ ಇರುತ್ತದೆ ಹಾಗೂ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದರೆ ಪಕ್ಷದ ಕಾರ್ಯಕರ್ತರಿಗೆ ಅವಕಾಶಗಳ ಕೊರತೆ ಎದುರಾಗುತ್ತದೆ ಎಂಬ ಕಾರಣಕ್ಕೆ ಏಕಾಂಗಿಯಾಗಿ ಸ್ಪರ್ಧಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಹೇಳಿದ್ದರು. ಈ ಬೆಳವಣಿಗೆ ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಒಗ್ಗಟ್ಟನ್ನು ಪ್ರಶ್ನಿಸಿತ್ತು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ವಿಧಾನಸಭಾ ಚುನಾವಣೆಗಾಗಿ ಮಹಾ ವಿಕಾಸ್ ಅಘಾಡಿ(ಎಂವಿಎ) ಮತ್ತು ಲೋಕಸಭೆ ಚುನಾವಣೆಗಾಗಿ INDIA ಮೈತ್ರಿಕೂಟವನ್ನು ರಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಮತ್ತು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಉದ್ದೇಶಿಸಲಾಗಿದೆ. ನಾನು ಅಥವಾ ನಮ್ಮ ಪಕ್ಷವು INDIA ಮೈತ್ರಿಕೂಟ ಅಥವಾ ಮಹಾ ವಿಕಾಸ್ ಅಘಾಡಿ(ಎಂವಿಎ) ವಿಸರ್ಜಿಸಬೇಕೆಂದು ಎಂದಿಗೂ ಹೇಳಿಲ್ಲ ಎಂದು ಹೇಳಿದ್ದಾರೆ.