ವಯನಾಡ್ ಉಪ ಚುನಾವಣೆ | ಕಾಂಗ್ರೆಸ್ ನಿಂದ ಬಿರುಸಿನ ಪ್ರಚಾರ
ತಿರುವನಂತಪುರಂ: ವಯನಾಡ್ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಗೆಲುವನ್ನು ಖಾತರಿ ಪಡಿಸಲು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ವಯನಾಡ್ ಲೋಕಸಭಾ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಪ್ರಾರಂಭಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯವರ ಸಹೋದರ ರಾಹುಲ್ ಗಾಂಧಿ ಗಳಿಸಿದ್ದ ಬೃಹತ್ ಅಂತರವಾದ 4.31 ಲಕ್ಷ ಮತಗಳಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಗೆಲುವನ್ನು ಖಾತರಿಪಡಿಸಲು ಕಾಂಗ್ರೆಸ್ ನಾಯಕರು ಯುದ್ಧೋಪಾದಿ ತಯಾರಿ ನಡೆಸುತ್ತಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರನ್ನು ಕ್ಷೇತ್ರಕ್ಕೆ ಸ್ವಾಗತಿಸುವ ಬಿತ್ತಿ ಚಿತ್ರಗಳು ವಯನಾಡ್ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಈಗಾಗಲೇ ಕಾಣಿಸಿಕೊಂಡಿವೆ. ಆ ಬಿತ್ತಿ ಚಿತ್ರಗಳಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ‘ವಯನಾಡ್ ನ ಅಚ್ಚುಮೆಚ್ಚಿನ ಪ್ರಿಯಾಂಕಾ’ ಎಂದು ಬಣ್ಣಿಸಲಾಗಿದೆ.
ಬುಧವಾರ ಸ್ಥಳೀಯ ಶಾಸಕ ಹಾಗೂ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಟಿ.ಸಿದ್ದೀಕಿ ನೇತೃತ್ವದಲ್ಲಿ ಚುನಾವಣಾ ತಂತ್ರಗಳ ಕುರಿತು ಸ್ಥಳೀಯ ನಾಯಕರು ಚರ್ಚೆ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಚುನಾವಣಾ ವ್ಯವಸ್ಥೆಗಳ ಪರಾಮರ್ಶೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನು ವಯನಾಡ್ ಗೆ ಸ್ವಾಗತಿಸಲು ಬೃಹತ್ ರೋಡ್ ಶೋ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ವಯನಾಡ್ ನ ಮೂರು ವಿಧಾನಸಭಾ ಕ್ಷೇತ್ರಗಳು, ಮಲಪ್ಪುರಂನ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಕೋಯಿಕ್ಕೋಡ್ ನ ಒಂದು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ವಯನಾಡ್ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಹಾಗೂ ಇಂಡಿಯನ್ ಮುಸ್ಲಿಂ ಲೀಗ್ ನ ಭದ್ರಕೋಟೆಯಾಗಿದೆ. ವಯನಾಡ್ ಕರ್ನಾಟಕ ಮತ್ತು ತಮಿಳುನಾಡಿನೊಂದಿಗೂ ಗಡಿ ಹಂಚಿಕೊಂಡಿದೆ.
ಸಿಪಿಐ, ಬಿಜೆಪಿ ಪಕ್ಷಗಳಿನ್ನೂ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಸಿಪಿಐ ಪಕ್ಷವು ಮಾಜಿ ಶಾಸಕ ಹಾಗೂ ಸಿಪಿಐನ ರಾಷ್ಟ್ರೀಯ ಮಂಡಳಿ ಸದಸ್ಯ ಸತ್ಯನ್ ಮೊಕೇರಿ ಅವರನ್ನು ಕಣಕ್ಕಿಳಿಸಲಿದೆ ಎಂಬ ವರದಿಗಳಿದ್ದು, ಈ ಕುರಿತು ಶೀಘ್ರದಲ್ಲೇ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.
ಸೌಜನ್ಯ : deccanherald.com