ಸಲ್ಮಾನ್ ಖಾನ್ ಹತ್ಯೆಗೈಯಲು 25 ಲಕ್ಷ ರೂ. ಸುಪಾರಿ ನೀಡಿದ್ದ ಬಿಷ್ಣೋಯಿ ಗ್ಯಾಂಗ್

Update: 2024-10-17 15:51 GMT

ಸಲ್ಮಾನ್ ಖಾನ್ | PC : PTI 

ಹೊಸದಿಲ್ಲಿ: ಖ್ಯಾತ ಬಾಲಿವುಡ್ ನಟ ಸಲ್ಮಾನ್‌ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಹತ್ಯೆಗೈಯಲು 25 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತೆಂದು, ನವಿಮುಂಬೈ ಪೊಲೀಸರು ಗುರುವಾರ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಬಂಧನದಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಗ್ಯಾಂಗ್ ಈ ಸುಪಾರಿಯನ್ನು ನೀಡಿತ್ತೆಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದ್ದು, ಐವರನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಈ ಕೃತ್ಯವನ್ನು ಎಸಗುವುದಕ್ಕಾಗಿ ಆರೋಪಿಗಳು ಪಾಕಿಸ್ತಾನದಿಂದ ಅತ್ಯಾಧುನಿಕ AK- 47, ಎಕೆ 92 ಹಾಗೂ ಎಂ16 ಶಸ್ತ್ರಾಸ್ತ್ರಗಳನ್ನು ಹಾಗೂ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಲಾದ ಟರ್ಕಿ ನಿರ್ಮಿತ ಝಿಗಾನಾ ಗನ್ ಅನ್ನು ಖರೀದಿಸಲು ಸಿದ್ಧತೆ ನಡೆಸುತ್ತಿದ್ದರು. ಆರೋಪಿಗಳು ಸಲ್ಮಾನ್ ಖಾನ್ ಹತ್ಯೆಗೈಯಲು 18 ವರ್ಷಕ್ಕಿಂತ ಕೆಳಗಿನ ಪ್ರಾಯದ ಬಾಲಕರನ್ನು ಗೊತ್ತುಪಡಿಸಿದ್ದರು. ಇವರೆಲ್ಲರೂ ಪುಣೆ,ನವಿ ಮುಂಬೈ, ಥಾಣೆ ಹಾಗೂ ಗುಜರಾತ್ ರಾಜ್ಯಜಲ್ಲಿ ಅವಿತಿದ್ದರೆಂದು ಪೊಲೀಸರು ತಿಳಿಸಿದ್ದಾ

ಸಲ್ಮಾನ್‌ನ ಚಲನವಲನಗಳ ಬಗ್ಗೆ ಅದರಲ್ಲೂ ಅವರ ಬಾಂದ್ರಾ ನಿವಾಸ, ಪಲ್ವೇಲ್ ಫಾರ್ಮ್‌ಹೌಸ್ ಹಾಗೂ ಗೋರೆಗಾಂವ್ ಫಿಲ್ಮ್‌ಸಿಟಿ ಮೇಲೆ ಸುಮಾರು 60-70 ಮಂದಿ ನಿಗಾವಿರಿಸಿದ್ದರು. ಆಗಸ್ಟ್ 2023 ಹಾಗೂ ಎಪ್ರಿಲ್ 2024ರ ನಡುವೆ ಸಲ್ಮಾನ್‌ಖಾನ್ ಅವರ ಹತ್ಯೆಗೆ ಸಂಚು ಹೂಡಲಾಗಿತ್ತು ಎಂದು ದೋಷಾರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಹರ್ಯಾಣದ ಪಾಣಿಪತ್‌ನಿಂದ ಗುರುವಾರ ಬಂಧಿತನಾದ ಸುಖ್ಖಾ ಈ ಕೃತ್ಯವನ್ನು ಎಸಗುವುದಕ್ಕಾಗಿ ಶೂಟರ್ ಅಜಯ್ ಕಶ್ಯಪ್ ಯಾನೆ ಎಕೆ ಹಾಗೂ ಇತರ ನಾಲ್ವರನ್ನು ಗೊತ್ತುಪಡಿಸಿದ್ದ. ಸಲ್ಮಾನ್ ಖಾನ್ ಅವರು ಬಿಗಿಯಾದ ಭದ್ರತೆ ಹಾಗೂ ಬುಲೆಟ್‌ನಿರೋಧಕ ವಾಹನಗಳಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊಲೆಯನ್ನು ನಡೆಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅಗತ್ಯವಿದೆಯೆಂದು ಕಶ್ಯಪ್ ಹಾಗೂ ಆತನ ತಂಡವು ನಡೆಸಿದ ಸ್ಥಳಸಮೀಕ್ಷೆ ನಡೆಸಿದ ಬಳಿಕ ತೀರ್ಮಾನಕ್ಕೆ ಬಂದಿತ್ತು.

ಸುಖ್ಖಾ ಇದಕ್ಕಾಗಿ ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಡೋಗರ್‌ನನ್ನು ವೀಡಿಯೊ ಕರೆ ಮೂಲಕ ಸಂಪರ್ಕಿಸಿದ್ದರು.ಇವರಿಬ್ಬರೂ ವ್ಯವಹಾರ ಕುದುರಿಸುವ ಮಾತುಕತೆ ನಡೆಸುತ್ತಿದ್ದಾಗ,ಡೋಗಾರ್ ಶಾಲ್‌ನಿಂದ ಹೊದೆಸಿದ AK- 47 ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದನು. ಆನಂತರ ಸುಖಾ ಶೇ.50ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಲು ಒಪ್ಪಿಕೊಂಡಿದ್ದ ಹಾಗೂ ಉಳಿದ ಮೊತ್ತವನ್ನು ಆಯುಧಗಳು ಕೈಸೇರಿದ ಬಳಿಕ ಪಾವತಿಸುವುದಾಗಿ ತಿಳಿಸಿದ್ದೆನೆಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News