ಮಹಾರಾಷ್ಟ್ರ | ಆಘಾತಕಾರಿ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: ಕಾಂಗ್ರೆಸ್

Update: 2024-11-24 08:08 GMT

Photo Credit: PTI

ಹೊಸದಿಲ್ಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಸರಕಾರ ಅಧಿಕಾರ ಸರಕಾರ ಉಳಿಸಿಕೊಂಡ ಮರುದಿನ, ಮಹತ್ವದ ಚುನಾವಣೆಯಲ್ಲಿ ಆಗಿರುವ ಆಘಾತಕಾರಿ ಹಿನ್ನಡೆಯ ಕುರಿತು ಮಹಾವಿಕಾಸ್ ಅಘಾಡಿಯ ಎಲ್ಲ ಮೈತ್ರಿಪಕ್ಷಗಳು ಒಗ್ಗೂಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ರವಿವಾರ ಕಾಂಗ್ರೆಸ್ ಹೇಳಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 230 ಸ್ಥಾನಗಳನ್ನು ಗಳಿಸುವುದರೊಂದಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದರೆ, ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಕೇವಲ 46 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವು ಆಘಾತಕಾರಿ ಮತ್ತು ನಂಬಲಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದರೊಂದಿಗೆ ಮಾತನಾಡಿರುವ ಅವರು, “ಏನಾಯಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಇದು ಕೇವಲ ಕಾಂಗ್ರೆಸ್ ಗಾಗಿರುವ ಹಿನ್ನಡೆಯಲ್ಲ; ಬದಲಿಗೆ ಇಡೀ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕಾಗಿರುವ ಹಿನ್ನಡೆ. ಏನಾಗಿದೆ ಎಂಬುದರ ಕುರಿತು ಮೊದಲು ಸ್ಪಷ್ಟ ಚಿತ್ರಣ ದೊರೆಯಲಿ” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ ಇಡೀ ಚುನಾವಣಾ ವಿಧಾನಗಳ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೇನಾದರೂ ವಂಚನೆಯಾಗಿರಬಹುದು ಎಂದು ಕಾಂಗ್ರೆಸ್ ಭಾವಿಸುತ್ತದೆಯೆ ಎಂಬ ಪ್ರಶ್ನೆಗೆ, ನಾವು ಹಿನ್ನಡೆ ಅನುಭವಿಸಿದ ಕೂಡಲೇ ಅಂತಹ ಆರೋಪಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾವು ಶರದ್ ಪವಾರ್, ಉದ್ಧವ್ ಠಾಕ್ರೆ ಹಾಗೂ ಕಾಂಗ್ರೆಸ್ ಭದ್ರಕೋಟೆಗಳಲ್ಲೇ ಹಿನ್ನಡೆ ಅನುಭವಿಸಿದ್ದೇವೆ. ಇದು ಕೇವಲ ಕಾಂಗ್ರೆಸ್ ವೈಫಲ್ಯವಾಗಿಲ್ಲ; ಬದಲಿಗೆ ಇಡೀ ಮೈತ್ರಿಕೂಟದ ವೈಫಲ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

ಹೀಗಾಗಿ ನಾವು ಒಟ್ಟಾಗಿ ಕುಳಿತು, ಹಿನ್ನಡೆಯ ಕಾರಣಗಳ ಕುರಿತು ಒಂದಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದೂ ವೇಣುಗೋಪಾಲ್ ಹೇಳಿದ್ದಾರೆ.

ಚುನಾವಣಾ ಆಯೋಗ ಪ್ರಕಟಿಸಿರುವ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 57 ಸ್ಥಾನಗಳಲ್ಲಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಸ್ಥಾನಗಳಲ್ಲಿ, ಕಾಂಗ್ರೆಸ್ 16 ಸ್ಥಾನಗಳಲ್ಲಿ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ 10 ಸ್ಥಾನಗಳಲ್ಲಿ ಮಾತ್ರ ಗೆಲುವು ದಾಖಲಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News