ದಿಲ್ಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ : 12ನೇ ತರಗತಿ ವಿದ್ಯಾರ್ಥಿಯ ಬಂಧನ
ಹೊಸದಿಲ್ಲಿ: ಕಳೆದ ಕೆಲವು ವಾರಗಳಲ್ಲಿ ದಿಲ್ಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ 12ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಬಂಧಿತ ವಿದ್ಯಾರ್ಥಿ ಕನಿಷ್ಠ ಆರು ಬಾರಿ ಬಾಂಬ್ ಬೆದರಿಕೆ ಇಮೇಲ್ ಗಳನ್ನು ಕಳುಹಿಸಿದ್ದಾನೆ. ಪ್ರತಿ ಬಾರಿಯೂ ತಮ್ಮ ಶಾಲೆಯನ್ನು ಹೊರತುಪಡಿಸಿ ಬೇರೆ ಬೇರೆ ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸುತ್ತಿದ್ದ. ಒಂದು ಬಾರಿ ಆತ ದಿಲ್ಲಿಯ ಕನಿಷ್ಠ 23 ಶಾಲೆಗಳಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದಾನೆ. ಶಾಲೆಯಲ್ಲಿ ಪರೀಕ್ಷೆ ನಡೆಯದಂತೆ ಭಯವನ್ನು ಸೃಷ್ಟಿಸಲು ಕೃತ್ಯವನ್ನು ಎಸಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನುಮಾನ ಬರದಂತೆ ತನ್ನ ಶಾಲೆಯನ್ನು ಬಿಟ್ಟು ಬೇರೆ ಶಾಲೆಗಳಿಗೆ ಆತ ಇಮೇಲ್ ಬೆದರಿಕೆಯನ್ನು ಕಳುಹಿಸಿದ್ದಾನೆ. ಆದರೆ, ಎಲ್ಲಾ ಬಾಂಬ್ ಬೆದರಿಕೆಗಳು ಹುಸಿಯಾಗಿತ್ತು. ವಿಚಾರಣೆ ವೇಳೆ ಆರೋಪಿ ವಿದ್ಯಾರ್ಥಿ ತಾನು ಈ ಹಿಂದೆಯೂ ಬೆದರಿಕೆ ಮೇಲ್ ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.