ನಾನು ಮನುಷ್ಯ, ದೇವರಲ್ಲ… ತಪ್ಪು ಮಾಡಿರಬೇಕು : ಪ್ರಧಾನಿ ಮೋದಿ
ಹೊಸದಿಲ್ಲಿ: ‘ನಾನು ಮನುಷ್ಯ, ದೇವರಲ್ಲ, ನಾನು ಕೂಡ ತಪ್ಪು ಮಾಡಿರಬೇಕು’ ಎಂದು ಪಾಡ್ ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ ಕ್ಯಾಸ್ಟ್ ನ ಮುಂದಿನ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿದ್ದಾರೆ. ಗುರುವಾರ ಸಂಜೆ ಪಾಡ್ ಕ್ಯಾಸ್ಟ್ ನ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ನಾಯಕತ್ವ, ಅಧಿಕಾರಾವಧಿ, ಜಾಗತಿಕ ವ್ಯವಹಾರಗಳು ಮತ್ತು ರಾಜಕೀಯದ ಬಗ್ಗೆ ಮೋದಿ ಅವರು ಕಾಮತ್ ರೊಂದಿಗೆ ಮಾತನಾಡುವುದು ಟ್ರೇಲರ್ ನಲ್ಲಿ ಕಂಡು ಬಂದಿದೆ.
'ಪೀಪಲ್ ವಿದ್ ದಿ ಪ್ರೈಮ್ ಮಿನಿಸ್ಟರ್'(People with the Prime Minister) ಎಂಬ ಶೀರ್ಷಿಕೆಯ ಪಾಡ್ ಕ್ಯಾಸ್ಟ್ ನಲ್ಲಿ ಕಾಮತ್ ಅವರು ಮೋದಿ ಅವರೊಂದಿಗೆ ಅಪರೂಪದ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ನಾನು ಪಾಡ್ ಕ್ಯಾಸ್ಟ್ನಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.
ಸಂಕ್ಷಿಪ್ತ ಕ್ಲಿಪ್ನಲ್ಲಿ, ಮೋದಿ ಅವರು ಜಾಗತಿಕ ಉದ್ವಿಗ್ನತೆ ಮತ್ತು ನಡೆಯುತ್ತಿರುವ ಯುದ್ಧದ ಕುರಿತು ಭಾರತದ ನಿಲುವನ್ನು ತಿಳಿಸುವುದನ್ನು ಕಾಣಬಹುದು, ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ನಾವು ತಟಸ್ಥರಲ್ಲ ಎಂದು ನಾವು ಪದೇ ಪದೇ ಹೇಳಿದ್ದೇವೆ. ನಾನು ಮತ್ತೆ ಮತ್ತೆ ಹೇಳುತ್ತೇನೆ. ನಾನು ಶಾಂತಿಯ ಪರವಾಗಿದ್ದೇನೆ ಎಂದು ಹೇಳಿದ್ದಾರೆ.
ಸಂದರ್ಶನದ ವೇಳೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ್ದ ಅಂಶವನ್ನು ಮೋದಿ ಮತ್ತೆ ಹೇಳಿದ್ದಾರೆ. “ತಪ್ಪುಗಳು ಸಂಭವಿಸುತ್ತದೆ. ನಾನಂತೂ ತಪ್ಪು ಮಾಡಿರಬೇಕು. ನಾನು ಮನುಷ್ಯ, ದೇವರಲ್ಲʼ ಎಂದು ಹೇಳಿದ್ದಾರೆ.
ಎರಡನೇ ಅವಧಿಯು ಮೊದಲ ಅವಧಿಗಿಂತ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಮೊದಲ ಅವಧಿಯಲ್ಲಿ ಜನರು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು ಮತ್ತು ನಾನು ದಿಲ್ಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಜನರು ಧ್ಯೇಯದೊಂದಿಗೆ ರಾಜಕೀಯಕ್ಕೆ ಬರಬೇಕು ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಒಳ್ಳೆಯ ಜನರು ರಾಜಕೀಯಕ್ಕೆ ಬರುವುದನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.