ಸಂಭಲ್ ಶಾಹಿ ಜಾಮಾ ಮಸೀದಿ ಬಳಿಯ ಬಾವಿ ಕುರಿತು ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ, ಯಥಾಸ್ಥಿತಿಗೆ ಆದೇಶ

Update: 2025-01-10 12:15 GMT

ಸುಪ್ರೀಂ ಕೋರ್ಟ್ | PC : ANI

ಹೊಸದಿಲ್ಲಿ: ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಪ್ರವೇಶದ್ವಾರದ ಬಳಿಯ ಖಾಸಗಿ ಬಾವಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಶುಕ್ರವಾರ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು, ತನ್ನ ಅನುಮತಿಯಿಲ್ಲದೆ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ನಿರ್ದೇಶನ ನೀಡಿದೆ.

ಈ ಬಗ್ಗೆ ನೋಟಿಸ್ ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ.‌ ಸಂಜಯ್ ಕುಮಾರ್ ಅವರ ಪೀಠವು ಎರಡು ವಾರಗಳಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.

ಶಾಹಿ ಜಾಮಾ ಮಸೀದಿಯ ಆಡಳಿತ ಸಮಿತಿಯು ಸಲ್ಲಿಸಿರುವ ಅರ್ಜಿಯು ಮಸೀದಿಯ ಸಮೀಕ್ಷೆಯನ್ನು ನಡೆಸಲು ಅಡ್ವೊಕೇಟ್ ಕಮಿಷನರ್ ನೇಮಕಕ್ಕೆ ಅನುಮತಿ ನೀಡಿದ್ದ ಸಂಭಲ್‌ನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ನ.19,2024ರ ಆದೇಶವನ್ನೂ ಪ್ರಶ್ನಿಸಿದೆ. ಸಮೀಕ್ಷೆಯು ಹಿಂಸಾಚಾರಕ್ಕೆ ಮತ್ತು ಜೀವಹಾನಿಗಳಿಗೆ ಕಾರಣವಾಗಿತ್ತು ಹಾಗೂ ಸರ್ವೋಚ್ಚ ನ್ಯಾಯಾಲಯವು ತುರ್ತಾಗಿ ಮಧ್ಯಪ್ರವೇಶಿಸುವಂತೆ ಮಾಡಿತ್ತು ಎಂದು ಸಮಿತಿಯು ತನ್ನ ಅರ್ಜಿಯಲ್ಲಿ ವಾದಿಸಿದೆ.

ಮಸೀದಿ ಸಮಿತಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹುಝೇಫಾ ಅಹ್ಮದಿಯವರು ಬಾವಿಯ ಐತಿಹಾಸಿಕ ಮಹತ್ವವನ್ನು ವಿವರಿಸುತ್ತ,‌ ‘ನಾವು ಅನಾದಿ ಕಾಲದಿಂದಲೂ ಈ ಬಾವಿಯ ನೀರನ್ನು ಬಳಸುತ್ತಿದ್ದೇವೆ ’ ಎಂದು ತಿಳಿಸಿದರು. ನಿವೇಶನವನ್ನು ‘ಹರಿ ಮಂದಿರ’ ಎಂದು ಉಲ್ಲೇಖಿಸಿರುವ ನೋಟಿಸ್ ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಆರಂಭಿಸುವ ಯೋಜನೆಗಳ ಬಗ್ಗೆ ಕಳವಳಗಳನ್ನೂ ಅವರು ವ್ಯಕ್ತಪಡಿಸಿದರು.

‘ಅಂತಹ ಯಾವುದೇ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ,ದಯವಿಟ್ಟು ಸ್ಥಿತಿಗತಿ ವರದಿಯನ್ನು ಸಲ್ಲಿಸಿ’ ಎಂದು ಮು.ನ್ಯಾ.ಖನ್ನಾ ಹೇಳಿದರು.

ಹಿಂದು ಕಕ್ಷಿದಾರರ ಪರ ವಕೀಲ ವಿಷ್ಣು ಶಂಕರ ಜೈನ್ ಅವರು,ಬಾವಿಯು ಮಸೀದಿ ವ್ಯಾಪ್ತಿಯಿಂದ ಹೊರಗಿದೆ ಮತ್ತು ಐತಿಹಾಸಿಕವಾಗಿ ಪೂಜೆಗೆ ಬಳಕೆಯಾಗುತ್ತಿತ್ತು ಎಂದು ಹೇಳಿದರು.

ಗೂಗಲ್ ಮ್ಯಾಪ್‌ನ ಚಿತ್ರವನ್ನು ಉಲ್ಲೇಖಿಸಿದ ಅಹ್ಮದಿ,ಬಾವಿಯು ಭಾಗಶಃ ಮಸೀದಿ ಆವರಣದಲ್ಲಿದೆ ಮತ್ತು ಭಾಗಶಃ ಹೊರಗಿದೆ ಎಂದು ಅಹ್ಮದಿ ವಾದಿಸಿದರು.

ಸರ್ವೋಚ್ಚ ನ್ಯಾಯಾಲಯದ ಅನುಮತಿಯಿಲ್ಲದೆ ಬಾವಿಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಸಂಭಲ್ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ಹೊರಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ನ.24ರಂದು ಸಮೀಕ್ಷೆ ತಂಡವು ಮಸೀದಿಗೆ ಆಗಮಿಸಿದ್ದಾಗ ಹಿಂಸಾಚಾರವು ಭುಗಿಲೆದ್ದು,ಮಸೀದಿಯಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ನಾಲ್ವರು ಕೊಲ್ಲಲ್ಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News