ಕೆನಡಾ | ನಾನೂ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿದ್ದೇನೆ: ಭಾರತೀಯ ಮೂಲದ ಸಂಸದ ಚಂದ್ರ ಆರ್ಯ
ಒಟ್ಟಾವ: ಮುಂದಿನ ನಾಯಕನನ್ನು ಮಾರ್ಚ್ 9ರಂದು ಆಯ್ಕೆ ಮಾಡಲಾಗುವುದು ಎಂದು ಲಿಬರಲ್ ಪಾರ್ಟಿ ಪ್ರಕಟಿಸಿದ ಬೆನ್ನಿಗೇ, ನಾನೂ ಕೂಡಾ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿದ್ದೇನೆ ಎಂದು ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಪ್ರಕಟಿಸಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ತಾವು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಆದರೆ, ಮುಂದಿನ ನಾಯಕನ ಆಯ್ಕೆಯಾಗುವವರೆಗೂ ನಾನೇ ಪ್ರಧಾನಿಯಾಗಿ ಮುಂದುವರಿಯುವೆ ಎಂದೂ ಅವರು ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಜನಿಸಿರುವ, ಒಟ್ಟಾವದ ನೇಪಿಯನ್ ಸಂಸದರಾದ ಚಂದ್ರ ಆರ್ಯ, ಗುರುವಾರ ಸಂಜೆ ಲಿಬರಲ್ ಪಾರ್ಟಿಯ ಸಭೆ ನಡೆಯುವುದಕ್ಕೂ ಮುನ್ನ ಎಕ್ಸ್ ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
“ದೇಶವನ್ನು ಮರು ನಿರ್ಮಾಣ ಮಾಡಲು ಸಣ್ಣ ಹಾಗೂ ಅತ್ಯಂತ ದಕ್ಷ ಸರಕಾರವನ್ನು ಮುನ್ನಡೆಸಲು ಹಾಗೂ ಭವಿಷ್ಯದ ತಲೆಮಾರಿಗೆ ಸಮೃದ್ಧಿಯನ್ನು ತರಲು ನಾನು ಕೆನಡಾ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿದ್ದೇನೆ” ಎಂದು ಎಕ್ಸ್ ನಲ್ಲಿ ಪ್ರಕಟಿಸಿರುವ ಚಂದ್ರ ಆರ್ಯ, ಅದರೊಂದಿಗೆ ಸುದೀರ್ಘ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.