ಬ್ಯಾಂಕುಗಳಿಗೆ ಅಸುರಕ್ಷಿತ ಸಾಲಗಳ ಬಾಕಿ ಚಿಂತೆ: ವಸೂಲಿ ಏಜೆಂಟ್‌ಗಳಿಗೆ ಹೆಚ್ಚಿದ ಬೇಡಿಕೆ; ವರದಿ

Update: 2025-01-10 12:38 GMT

ಸಾಂದರ್ಭಿಕ ಚಿತ್ರ | freepik.com

ಹೊಸದಿಲ್ಲಿ: ಚಿಲ್ಲರೆ ಸಾಲಗಳು,ಮುಖ್ಯವಾಗಿ ಅಸುರಕ್ಷಿತ ಸಾಲಗಳು ಮರುಪಾವತಿಯಾಗದೆ ಬ್ಯಾಂಕುಗಳ ಮೇಲೆ ಒತ್ತಡ ಹೆಚ್ಚುತ್ತಿದೆ,ಇದರಿಂದಾಗಿ ಸಾಲವಸೂಲಿ ಏಜೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಜೊತೆಗೆ ಬ್ಯಾಂಕುಗಳು ಸಹ ತಮ್ಮ ಸೇಲ್ಸ್ ಸಿಬ್ಬಂದಿಗಳನ್ನು ಸಾಲವಸೂಲಿ ಕೆಲಸಕ್ಕೆ ತೊಡಗಿಸುವುದು ಹೆಚ್ಚುತ್ತಿದೆ. ಸಾಲ ವಸೂಲಿ ಕಾರ್ಯವನ್ನು ವಾಣಿಜ್ಯ ಬ್ಯಾಂಕುಗಳು ಹೆಚ್ಚಾಗಿ ಹೊರಗುತ್ತಿಗೆ ನೀಡುತ್ತಿವೆ ಎಂದು business-standard.com ವರದಿ ಮಾಡಿದೆ.

ಟೈಮ್‌ಲೀಸ್ ಸರ್ವಿಸಸ್ ಪ್ರಕಾರ ಜುಲೈ 2024ರಲ್ಲಿ ಬಿಎಫ್‌ಎಸ್‌ಐ (ಬ್ಯಾಂಕಿಂಗ್,ಹಣಕಾಸು ಸೇವೆಗಳು ಮತ್ತು ವಿಮೆ) ಕ್ಷೇತ್ರದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಒಟ್ಟು ಸಂಖ್ಯೆ 77,000 ಆಗಿದ್ದು,ಈ ಪೈಕಿ 6,000 ಜನರು ಸಾಲ ವಸೂಲಿ ಏಜೆಂಟ್‌ಗಳಾಗಿದ್ದರು. ಡಿಸೆಂಬರ್ 2024ರ ವೇಳೆಗೆ ಸಾಲ ವಸೂಲಿ ಏಜೆಂಟ್‌ಗಳ ಸಂಖ್ಯೆಯಲ್ಲಿ ಸರಿಸುಮಾರು ಪ್ರತಿಶತ 50ರಷ್ಟು ಏರಿಕೆಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಇದ್ದಂತೆ ಒಟ್ಟು 82,000 ಹೊರಗುತ್ತಿಗೆ ಸಿಬ್ಬಂದಿಗಳ ಪೈಕಿ 8,800 ಸಾಲ ವಸೂಲಿ ಏಜೆಂಟ್‌ಗಳಾಗಿದ್ದರು.

‘ಅಸುರಕ್ಷಿತ ಸಾಲಗಳು ಹೆಚ್ಚಿವೆ ಮತ್ತು ಅವು ಸುಸ್ತಿಯಾಗುವುದೂ ಹೆಚ್ಚಿದೆ, ಹೀಗಾಗಿ ಚಿಲ್ಲರೆ ಸಾಲ ಕ್ಷೇತ್ರದಲ್ಲಿ,ನಿರ್ದಿಷ್ಟವಾಗಿ ಕ್ರೆಡಿಟ್ ಕಾರ್ಡ್‌ಗಳು ಮತ್ತು ವೈಯಕ್ತಿಕ ಸಾಲಗಳಂತಹ ಅಸುರಕ್ಷಿತ ಸಾಲಗಳ ವಸೂಲಿಗಾಗಿ ಏಜೆಂಟ್‌ಗಳಿಗೆ ಬೇಡಿಕೆ ಕಳೆದ ಆರು ತಿಂಗಳುಗಳಿಂದ ಹೆಚ್ಚುತ್ತಿದೆ. ಸೇಲ್ಸ್ ಸಂಬಂಧಿತ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಕೋರುತ್ತಿರುವ ನಮ್ಮ ಕೆಲವು ಗ್ರಾಹಕರು ಈಗ ಸಾಲ ವಸೂಲಿಗಾಗಿ ನಮ್ಮ ನೆರವು ಕೇಳುತ್ತಿದ್ದಾರೆ’ ಎಂದು ಟೀಮ್‌ಲೀಸ್ ಸರ್ವಿಸಸ್‌ನ ಉಪಾಧ್ಯಕ್ಷ ಹಾಗೂ ವ್ಯವಹಾರ ಮುಖ್ಯಸ್ಥ ಕೃಷ್ಣೇಂದು ಚಟರ್ಜಿ ತಿಳಿಸಿದರು.

ಆರ್‌ಬಿಐ ತನ್ನ ‘ಭಾರತದಲ್ಲಿ ಬ್ಯಾಂಕಿಂಗ್‌ನ ಪ್ರವೃತ್ತಿಗಳು ಮತ್ತು ಪ್ರಗತಿ 2023-24’ ವಾರ್ಷಿಕ ವರದಿಯಲ್ಲಿ ಅಸುರಕ್ಷಿತ ಸಾಲ ಸುಸ್ತಿಗಳಲ್ಲಿ ಹೆಚ್ಚಳದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದು, ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕರೆ ನೀಡಿದೆ. ವಾಣಿಜ್ಯ ಬ್ಯಾಂಕುಗಳು ನೀಡಿರುವ ಒಟ್ಟು ಸಾಲಗಳಲ್ಲಿ ಅಸುರಕ್ಷಿತ ಸಾಲಗಳ ಪಾಲು ಮಾಚ್ 2015ರಿಂದ ಸ್ಥಿರವಾಗಿ ಬೆಳೆಯುತ್ತಲೇ ಬಂದಿದ್ದು,ಮಾರ್ಚ್ 2023ರಲ್ಲಿ ಶೇ.25.5ಕ್ಕೆ ತಲುಪಿತ್ತು. ಒಂದು ವರ್ಷದ ನಂತರ ಇದು ಶೇ.25.3ಕ್ಕೆ ಇಳಿದಿದೆ.

ನವಂಬರ್ 2023ರಲ್ಲಿ ಆರ್‌ಬಿಐ ಅಸುರಕ್ಷಿತ ವೈಯಕ್ತಿಕ ಸಾಲಗಳು,ಕ್ರೆಡಿಟ್ ಕಾರ್ಡ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್‌ಬಿಎಫ್‌ಸಿ)ಗಳಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕುಗಳು ಹೆಚ್ಚಿನ ಅಪಾಯವನ್ನು ಪರಿಗಣಿಸುವುದನ್ನು ಕಡ್ಡಾಯಗೊಳಿಸಿ ಕಠಿಣ ಮಾನದಂಡಗಳನ್ನು ಹೊರಡಿಸಿತ್ತು.

ಸುಸ್ತಿದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಚಿಲ್ಲರೆ ಸಾಲಗಳ ನೀಡಿಕೆಯಲ್ಲಿ ಕೊಂಚ ನಿಧಾನ ಗತಿ ಕಂಡು ಬರುತ್ತಿದೆ. ಸ್ಪಷ್ಟವಾಗಿ,ಅವು ಸಾಲ ವಸೂಲಿಯ ಮೇಲೆ ಗಮನವನ್ನು ಕೇಂದ್ರೀಕರಿಸಿವೆ. ಬಹಳಷ್ಟು ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ತಮ್ಮ ಸಾಲ ವಸೂಲಿ ತಂಡಗಳನ್ನು ಬಲಗೊಳಿಸಿವೆ ಅಥವಾ ಕೆಲವು ಸುಸ್ತಿದಾರರ ಮೇಲೆ ಗಮನವನ್ನು ಕೇಂದ್ರೀಕರಿಸಲು ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ಐಸಿಎಆರ್‌ನ ಫೈನಾನ್ಶಿಯಲ್ ಸೆಕ್ಟರ್ ರೇಟಿಂಗ್ಸ್‌ನ ಹಿರಿಯ ಉಪಾಧ್ಯಕ್ಷ ಕಾರ್ತಿಕ ಶ್ರೀನಿವಾಸನ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News