ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋಟ್‌ಗಳ ಪಟ್ಟಿಯಲ್ಲಿ 85ನೇ ಸ್ಥಾನಕ್ಕೆ ಕುಸಿದ ಭಾರತ

Update: 2025-01-10 12:34 GMT

ಸಾಂದರ್ಭಿಕ ಚಿತ್ರ | PC : NDTV 

ಹೊಸದಿಲ್ಲಿ: ಬುಧವಾರ ಬಿಡುಗಡೆಗೊಂಡ 2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋಟ್‌ಗಳ ಪಟ್ಟಿಯಲ್ಲಿ ಭಾರತವು 199 ದೇಶಗಳ ಪೈಕಿ 80ನೇ ಸ್ಥಾನದಿಂದ 85ನೇ ಸ್ಥಾನಕ್ಕೆ ಕುಸಿದಿದೆ.

ಪೌರತ್ವ ಮತ್ತು ವಸತಿ ಸಲಹಾ ಸಂಸ್ಥೆಯಾಗಿರುವ ಹೆನ್ಲಿ ಆ್ಯಂಡ್ ಪಾರ್ಟನರ್ಸ್ ಪ್ರಕಟಿಸಿರುವ ಸೂಚ್ಯಂಕವು, ನಿರ್ದಿಷ್ಟ ದೇಶವೊಂದರ ಪಾಸ್‌ಪೋರ್ಟ್ ಹೊಂದಿರುವವರು ನಿರ್ಗಮನ ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎನ್ನುವುದರ ಆಧಾರದಲ್ಲಿ ವಿಶ್ವಾದ್ಯಂತದ ಎಲ್ಲ ಪಾಸ್‌ಪೋರ್ಟ್‌ಗಳ ಬಲವನ್ನು ಅಳೆಯುತ್ತದೆ.

ಹೆನ್ಲಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ 2006 ಮತ್ತು 2025ರ ನಡುವಿನ ದತ್ತಾಂಶಗಳ ಪ್ರಕಾರ ಭಾರತವು 2021ರಲ್ಲಿ 90ನೇ ಸ್ಥಾನದಲ್ಲಿದ್ದು,ಇದು ಅದರ ಸಾರ್ವಕಾಲಿಕ ಕನಿಷ್ಠವಾಗಿತ್ತು. 2006ಲ್ಲಿ ಅದು 71ನೇ ಸ್ಥಾನದಲ್ಲಿದ್ದು,ಇದು ಅದರ ಅತ್ಯುತ್ತಮ ಶ್ರೇಯಾಂಕವಾಗಿತ್ತು. ಕಳೆದ ವರ್ಷ ಭಾರತವು 85ನೇ ಸ್ಥಾನದಲ್ಲಿದೆ. 2021ರ ಬಳಿಕ ಇದು ದೇಶದ ಕನಿಷ್ಠ ಶ್ರೇಯಾಂಕವಾಗಿದೆ.

ಇತ್ತೀಚಿನ ಸೂಚ್ಯಂಕದ ಪ್ರಕಾರ ಭಾರತೀಯರು ವೀಸಾ ಇಲ್ಲದೆ 57 ದೇಶಗಳಿಗೆ ಪ್ರಯಾಣಿಸಬಹುದು,ಕಳೆದ ವರ್ಷ ಈ ಸಂಖ್ಯೆ 62 ಆಗಿತ್ತು.

2025ನೇ ಸಾಲಿನ ಸೂಚ್ಯಂಕದಲ್ಲಿ ಭಾರತವು ಈಕ್ವೇಟರಿಯಲ್ ಗಿನಿ ಮತ್ತು ನೈಜರ್ ಜೊತೆ 85ನೇ ಸ್ಥಾನವನ್ನು ಹಂಚಿಕೊಂಡಿದೆ. 2024ರಲ್ಲಿ ಅನುಕ್ರಮವಾಗಿ 101 ಮತ್ತು 97ನೇ ಸ್ಥಾನಗಳಲ್ಲಿದ್ದ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಈಗ 103 ಮತ್ತು ನೂರನೇ ಸ್ಥಾನಕ್ಕೆ ಕುಸಿದಿವೆ.

ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ತನ್ನ ಅಗ್ರಸ್ಥಾನವನ್ನು ಸಿಂಗಾಪುರ ಉಳಿಸಿಕೊಂಡಿದೆ. ಈ ದೇಶದ ಪ್ರಜೆಗಳು ನಿರ್ಗಮನ ಪೂರ್ವ ವೀಸಾ ಇಲ್ಲದೆ 195 ದೇಶಗಳಿಗೆ ಭೇಟಿ ನೀಡಬಹುದು. ಜಪಾನ್ ವಿಶ್ವದ ಎರಡನೇ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶವಾಗಿದೆ.

ಕಳೆದ ವರ್ಷ ಫ್ರಾನ್ಸ್,ಜರ್ಮನಿ,ಇಟಲಿ,ಜಪಾನ್,ಸಿಂಗಾಪುರ ಮತ್ತು ಸ್ಪೇನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು. ಅದೇ ಮೊದಲ ಬಾರಿಗೆ ಆರು ದೇಶಗಳನ್ನು ಪ್ರಥಮ ಶ್ರೇಯಾಂಕವನ್ನು ಹಂಚಿಕೊಂಡಿದ್ದವು.

ಈ ವರ್ಷ ಫಿನ್ಲಂಡ್,ಫ್ರಾನ್ಸ್,ಜರ್ಮನಿ,ಇಟಲಿ,ದಕ್ಷಿಣ ಕೊರಿಯಾ ಮತ್ತು ಸ್ಪೇನ್ ಮೂರನೇ ಸ್ಥಾನದಲ್ಲಿದ್ದು,ಈ ದೇಶಗಳ ಪ್ರಜೆಗಳು ನಿರ್ಗಮನ ಪೂರ್ವ ವೀಸಾ ಇಲ್ಲದೆ 192 ರಾಷ್ಟ್ರಗಳಿಗೆ ಪ್ರಯಾಣಿಸಬಹುದು.

106ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ್ ಅತ್ಯಂತ ದುರ್ಬಲ ಪಾಸ್‌ಪೋರ್ಟ್ ಹೊಂದಿದ್ದು,ಅಲ್ಲಿಯ ಪ್ರಜೆಗಳು ವೀಸಾ ಇಲ್ಲದೆ ಕೇವಲ 26 ದೇಶಗಳಿಗೆ ಭೇಟಿ ನೀಡಬಹುದು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News