ಜೆಇಇ-ಅಡ್ವಾನ್ಸ್ಡ್: ಪರೀಕ್ಷಾ ಪ್ರಯತ್ನಗಳಲ್ಲಿ ಕಡಿತದ ವಿರುದ್ಧ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Update: 2025-01-10 13:59 GMT

ಸುಪ್ರೀಂ ಕೋರ್ಟ್ | PC :  PTI 

ಹೊಸದಿಲ್ಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ)-ಅಡ್ವಾನ್ಸ್ಡ್ ಅನ್ನು ಬರೆಯಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಅವಕಾಶಗಳ ಸಂಖ್ಯೆಯನ್ನು ಮೂರರಿಂದ ಎರಡಕ್ಕೆ ಇಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.

ಗುರುವಾರ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ಅರ್ಜಿಯು ವಿಚಾರಣೆಗೆ ಬಂದಾಗ ಅರ್ಜಿದಾರರ ಪರ ವಕೀಲರು,ಅರ್ಜಿಯು ಐಐಟಿಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದೆ. ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಅವಕಾಶಗಳನ್ನು ಮೂರರಿಂದ ಎರಡಕ್ಕೆ ತಗ್ಗಿಸಲಾಗಿದೆ. ಇಂತಹುದೇ ಅರ್ಜಿಯನ್ನು ಜ.10ರಂದು ಪೀಠದ ಮುಂದೆ ವಿಚಾರಣೆಗಾಗಿ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು. ನಂತರ ನ್ಯಾಯಾಲಯವು ಎರಡೂ ಅರ್ಜಿಗಳನ್ನು ಒಟ್ಟಿಗೆ ಲಗತ್ತಿಸುವಂತೆ ನಿರ್ದೇಶನ ನೀಡಿತು.

ವಕೀಲ ಸಂಜೀತ್ ಕುಮಾರ್ ತ್ರಿವೇದಿಯವರ ಮೂಲಕ ಸಲ್ಲಿಸಲಾಗಿರುವ ಹೊಸ ಅರ್ಜಿಯಲ್ಲಿ, ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ ಹೊಣೆಗಾರಿಕೆಯನ್ನು ಹೊಂದಿರುವ ಜಂಟಿ ಪ್ರವೇಶ ಮಂಡಳಿ(ಜೆಎಬಿ)ಯು ವಿದ್ಯಾರ್ಥಿಗಳಿಗೆ ಅರ್ಹತಾ ಮಾನದಂಡಗಳನ್ನು ನಿರಂಕುಶವಾಗಿ ಬದಲಿಸಿದೆ. ಜೆಎಬಿಯು ತನ್ನ ನ.5,2024ರ ಪತ್ರಿಕಾ ಪ್ರಕಟಣೆಯಲ್ಲಿ ಜೆಇಇ-ಅಡ್ವಾನ್ಸ್ಡ್ ಗೆ ಅನುಮತಿಸುವ ಪ್ರಯತ್ನಗಳ ಸಂಖ್ಯೆಯನ್ನು ಮೂರು ಎಂದು ನಿಗದಿಗೊಳಿಸಿತ್ತು,ಆದರೆ ನ.8,2024ರ ಇನ್ನೊಂದು ಪತ್ರಿಕಾ ಪ್ರಕಟಣೆಯಲ್ಲಿ ಈ ಸಂಖ್ಯೆಯನ್ನು ಎರಡಕ್ಕೆ ಇಳಿಸಿದೆ. ಅರ್ಹತಾ ಮಾನದಂಡದಲ್ಲಿನ ಈ ಹಠಾತ್ ಬದಲಾವಣೆಗಳು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದ್ದು, ಐಐಟಿಗಳನ್ನು ಪ್ರವೇಶಿಸಲು ಅಮೂಲ್ಯವಾದ ಅವಕಾಶವನ್ನು ನಿರಾಕರಿಸುವ ಮೂಲಕ ಅರ್ಜಿದಾರರು ಮತ್ತು ಇದೇ ಸ್ಥಿತಿಯಲ್ಲಿರುವ ಸಾವಿರಾರು ಇತರರ ಮೇಲೆ ಪರಿಣಾಮವನ್ನು ಬೀರಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News