ದೇಶಾದ್ಯಂತ ನಡೆದಿದ್ದ ʼಡಿಜಿಟಲ್ ಅರೆಸ್ಟ್ʼ ಸೂತ್ರಧಾರಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಕೋಲ್ಕತ್ತಾ ಪೊಲೀಸರು; ವರದಿ
ಬೆಂಗಳೂರು: ದೇಶಾದ್ಯಂತ ನಡೆದಿದ್ದ ʼಡಿಜಿಟಲ್ ಅರೆಸ್ಟ್ʼ ಸೂತ್ರಧಾರಿ ಚಿರಾಗ್ ಕಪೂರ್ ನನ್ನು ಬೆಂಗಳೂರಿನಿಂದ ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಚಿರಾಗ್ ಕಪೂರ್ 930 ಡಿಜಿಟಲ್ ಅರೆಸ್ಟ್ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ ಎಂದು news18.com ವರದಿ ಮಾಡಿದೆ.
ಡಿಜಿಟಲ್ ಅರೆಸ್ಟ್ ಹಗರಣವು ವಂಚಕರು ಕಾನೂನು ಜಾರಿ ಪ್ರಾಧಿಕಾರಗಳ ಅಧಿಕಾರಿಗಳಂತೆ ಸೋಗು ಹಾಕಿ ಸಂತ್ರಸ್ತರಿಗೆ ನಕಲಿ ಆರೋಪಗಳ ಮೇಲೆ ಬಂಧನದ ಬೆದರಿಕೆ ಒಡ್ಡುವುದು ಹಾಗೂ ಅವರು ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವಂತಹ ಒತ್ತಡಕ್ಕೆ ಒಳಗಾಗುವುದನ್ನು ಒಳಗೊಂಡಿದೆ.
ದೂರುದಾರೆ ದುಬಾಶ್ರೀ ದತ್ತ (ದೇಬಾಶಿ ದತ್ತ) ಎಂಬವರಿಗೆ ಕಾನೂನು ಕ್ರಮದ ಬೆದರಿಕೆ ಒಡ್ಡಿ, 47 ಲಕ್ಷ ರೂ. ಗಳನ್ನು ವಂಚಿಸಲಾಗಿತ್ತು. ನಿಮ್ಮ ಹೆಸರು ಹಾಗೂ ವಿಳಾಸವನ್ನು ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಪಾರ್ಸೆಲ್ ಅನ್ನು ರವಾನಿಸಲು ಬಳಸಲಾಗಿದ್ದು, ಈ ಪ್ರಕರಣವು ಅಕ್ರಮ ಹಣ ವರ್ಗಾವಣೆ ಆರೋಪವನ್ನು ಒಳಗೊಂಡಿದೆ ಎಂದು ಬೆದರಿಕೆ ಒಡ್ಡಲಾಗಿತ್ತು. ಇದರಿಂದ ಹದರಿದ್ದ ದೂರುದಾರೆ ದೇಬಾಶ್ರೀ ದತ್ತ, ಸೈಬರ್ ಅಪರಾಧಿಗಳು ಸೂಚಿಸಿದ್ದ ವಿವಿಧ ಖಾತೆಗಳಿಗೆ ತಮ್ಮ ಹಣವನ್ನು ವರ್ಗಾಯಿಸಿದ್ದರು.
ದೂರುದಾರೆ ದೇಬಾಶ್ರೀ ದತ್ತ ದಿನಾಂಕ ಜೂನ್ 12, 2024ರಂದು ಜಮೆ ಮಾಡಿದ್ದ ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಖಾತೆದಾರ: ಉಮಾ ಬುರ್ನೆ, ಬ್ರೈನ ಬರ್ಸ್ಟ್ ರೊಬೋಟಿಕ್ಸ್ ಮಾಲಕಿ) ಜಾಡು ಹಿಡಿದ ಪೊಲೀಸರು, ಸೆಪ್ಟೆಂಬರ್ 28, 2024ರಂದು ಆನಂದಪುರ್, ಪತೌಲಿ ಹಾಗೂ ನರೇಂದ್ರಪುರ್ ನಲ್ಲಿ ವ್ಯಾಪಕ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಒಟ್ಟಾರೆಯಾಗಿ 8 ಮಂದಿಯನ್ನು ಬಂಧಿಸಲಾಗಿತ್ತು ಹಾಗೂ ನಕಲಿ ಖಾತೆಗಳನ್ನು ನಿರ್ವಹಿಸುತ್ತಿದ್ದ ತಾತ್ಕಾಲಿಕ ಕಚೇರಿಯೊಂದನ್ನು ಪತ್ತೆ ಹಚ್ಚಲಾಗಿತ್ತು. ಇದರೊಂದಿಗೆ, 104 ಪಾಸ್ ಬುಕ್ ಗಳು/ಚೆಕ್ ಬುಕ್ ಗಳು, 61 ಮೊಬೈಲ್ ಫೋನ್ ಗಳು, 33 ಡೆಬಿಟ್ ಕಾರ್ಡ್ ಗಳು, ಎರಡು ಕ್ಯೂಆರ್ ಕೋಡ್ ಯಂತ್ರಗಳು, 140 ಸಿಮ್ ಕಾರ್ಡ್ ಗಳು, 40 ಮುದ್ರೆಗಳು ಹಾಗೂ 10 ಭೋಗ್ಯ ಕರಾರುಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ನಂತರ, ಖಾತೆಗಳನ್ನು ಸಂಗ್ರಹಿಸಲು ಹಾಗೂ ಅವರ ಇಮೇಲ್ ವಿಳಾಸ, ಪಾಸ್ ವರ್ಡ್, ಇನ್ನಿತರ ವಿವರಗಳನ್ನು ಬದಲಿಸಲು ಕಚೇರಿಯಲ್ಲಿ ಸಿಸಿಟಿವಿ ನಿಗಾವಣೆ ಅಳವಡಿಸಿರುವುದು ಪತ್ತೆಯಾಗಿತ್ತು. ನಂತರ ಈ ವಿವರಗಳನ್ನು ಭಾರತದಾದ್ಯಂತ ಇರುವ ವಂಚಕರಿಗೆ ಮಾರಾಟ ಮಾಡಲಾಗುತ್ತಿತ್ತು.
ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಚಿರಾಗ್ ಕಪೂರ್ ಈ ಜಾಲದ ಮುಖ್ಯ ನಿರ್ವಾಹಕ ಎಂಬ ಸಂಗತಿ ಮುನ್ನೆಲೆಗೆ ಬಂದಿದೆ. ತನ್ನ ಮೇಲೆ ಯಾವುದೇ ಸಂಶಯ ಬರದಿರಲು ಹಾಗೂ ನಿಗಾವಣೆಯಿಂದ ಪಾರಾಗಲು ದೂರದಿಂದಲೇ ತನ್ನ ವ್ಯಕ್ತಿಗಳು ಹಾಗೂ ಏಜೆಂಟ್ ಗಳ ಮೂಲಕ ಆತ ಈ ಜಾಲವನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಮತ್ತಷ್ಟು ತನಿಖೆಯ ಸಂದರ್ಭದಲ್ಲಿ, ಚಿರಾಗ್ ಕಪೂರ್ ನ ಸಹವರ್ತಿಯೊಬ್ಬನನ್ನು ಅಕ್ಟೋಬರ್ 26, 2024ರಂದು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ಆತ ಇಂತಹ ನಕಲಿ ಖಾತೆಗಳನ್ನು ಪೂರೈಸುತ್ತಿದ್ದ ಹಾಗೂ ಅವುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಈವರೆಗೆ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿ ಚಿರಾಗ್ ಕಪೂರ್ ಮಾತ್ರ ತಲೆ ಮರೆಸಿಕೊಂಡಿದ್ದ. ಆದರೆ, ಕೋಲ್ಕತ್ತಾ ಪೊಲೀಸರು ಆತನನ್ನು ಬೆಂಗಳೂರಿನ ಜೆ.ಪಿ.ನಗರದ ನಾಲ್ಕನೆ ಬ್ಲಾಕ್ ನಿಂದ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆತನಿಂದ ಮೂರು ರೂಟರ್ ಗಳು, ಎರಡು ಹಾರ್ಡ್ ಡಿಸ್ಕ್ ಗಳು, ಒಂದು ಲ್ಯಾಪ್ ಟಾಪ್, ಒಂದು ಬೀಟೆಲ್ ಲ್ಯಾಂಡ್ ಲೈನ್ ಫೋನ್, ಸಿಮ್ ಕಾರ್ಡ್ ಗಳೊಂದಿಗೆ ನಾಲ್ಕು ಮೊಬೈಲ್ ಫೋನ್ ಗಳು, ಐದು ಸಿಮ್ ಕಾರ್ಡ್ ಗಳು, ಮೂರು ಪಾನ್ ಕಾರ್ಡ್ ಗಳು, ನಾಲ್ಕು ಚೆಕ್ ಬುಕ್ ಗಳು, ಒಂದು ಯುಎಸ್ಬಿ ಹಾಗೂ ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಹೆಸರಿನ ಆರು ರಬ್ಬರ್ ಮುದ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಸಂಬಂಧಿತ ವ್ಯಾಪ್ತಿಯ ನ್ಯಾಯಾಲಯದೆದುರು ಹಾಜರುಪಡಿಸಲಾಗುತ್ತಿದ್ದು, ವರ್ಗಾವಣೆ ವಶಕ್ಕೆ ಮನವಿ ಮಾಡಲಾಗಿದೆ.