ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ: ಕ್ಷಮಾದಾನ ಆಸೆ ಜೀವಂತ !
ಹೊಸದಿಲ್ಲಿ: ಸಂಘರ್ಷಪೀಡಿತ ಯೆಮನ್ ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಕ್ಷಮಾದಾನದ ಆಸೆ ಇನ್ನೂ ಜೀವಂತವಾಗಿ ಉಳಿದಿದೆ. ವ್ಯವಹಾರ ಪಾಲುದಾರ ತಲಲ್ ಅಬ್ದೊ ಮೆಹ್ದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಜೀವನವೆಚ್ಚ ನೀಡುವ ಮೂಲಕ ಕ್ಷಮಾದಾನವನ್ನು ಕೋರುವ ಉದ್ದೇಶದಿಂದ ಇರಾನ್ ಅಧಿಕಾರಿಗಳು ಹತ್ಯೆಗೀಡಾದ ಮೆಹ್ದಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇರಾನ್ ಬೆಂಬಲಿತ ಹೌದಿಗಳ ನಿಯಂತ್ರಣದಲ್ಲಿರುವ ಯೆಮನ್ ರಾಜಧಾನಿ ಸನಾದಲ್ಲಿ ಪ್ರಸ್ತುತ 37 ವರ್ಷದ ನಿಮಿಷಾ ಪ್ರಿಯಾ ಜೈಲುವಾಸ ಅನುಭವಿಸುತ್ತಿದ್ದಾರೆ.
"ಇದು ಒಂದು ಬಗೆಯ ಪರಿಹಾರವಾಗಿದೆ. ಹೌತಿಗಳ ಜತೆಗಿನ ಉತ್ತಮ ಸಂಬಂಧವನ್ನು ಬಳಸಿಕೊಂಡು ಇರಾನ್ ಅಧಿಕಾರಿಗಳು ಸಂತ್ರಸ್ತರ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಜೀವನವೆಚ್ಚಕ್ಕೆ ನೀಡುವ ಸಲುವಾಗಿ ಹಣವನ್ನು ವ್ಯವಸ್ಥೆ ಮಾಡಲಾಗಿದೆ. ಕ್ಷಮಾದಾನ ಕೋರಿ ಕುಟುಂಬದ ಜತೆ ಚರ್ಚೆ ನಡೆಲಾಗುತ್ತಿದೆ" ಎಂದು ಮೂಲಗಳು ಹೇಳಿವೆ. ಪರಿಹಾರ ನೀಡುವ ಸಲುವಾಗಿ 30 ಲಕ್ಷ ರೂಪಾಯಿಗಳನ್ನು ಇರಿಸಲಾಗಿದೆ" ಎಂದು ಹೇಳಿವೆ.
ನರ್ಸ್ ಬಿಡುಗಡೆಗೆ ಪ್ರಯತ್ನ ನಡೆಸುವ ಇಂಗಿತವನ್ನು ಇರಾನ್ ನ ಹಿರಿಯ ಅಧಿಕಾರಿಯೊಬ್ಬರು ಕಳೆದ ವಾರ ವ್ಯಕ್ತಪಡಿಸಿದ್ದರು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ನಿಮಿಷಪ್ರಿಯಾ, ಯೆಮನ್ ಪ್ರಜೆಯನ್ನು 2017ರ ಜುಲೈನಲ್ಲಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 2020ರಲ್ಲಿ ಯೆಮನ್ನ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಜ್ಯುಡಿಶಿಯಲ್ ಕೌನ್ಸಿಲ್ 2023ರ ನವೆಂಬರ್ ನಲ್ಲಿ ಎತ್ತಿಹಿಡಿದಿತ್ತು. ಈ ಪ್ರಕರಣದ ಮೇಲೆ ನಿಗಾ ಇರಿಸಲಾಗಿದೆ ಎಂದು ಭಾರತ ಕಳೆದ ವಾರ ಹೇಳಿತ್ತು.