ಮಹಾರಾಷ್ಟ್ರದಲ್ಲಿ ಎನ್ಡಿಎ ಜಯಭೇರಿ | ‘ಒಂದಾಗಿದ್ದರೆ ಸುರಕ್ಷಿತರಾಗಿರುತ್ತೀರಿ’ ಎಂಬುದೀಗ ದೇಶದ ಮಹಾಮಂತ್ರ : ಪ್ರಧಾನಿ ಮೋದಿ
ಹೊಸದಿಲ್ಲಿ : ಶನಿವಾರ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ಒಂದಾಗಿದ್ದರೆ, ಸುರಕ್ಷಿತರಾಗಿರುತ್ತೀರಿ ಎಂಬ ಘೋಷಣೆಯನ್ನು ಪುನರುಚ್ಚರಿಸಿದ್ದು, ಅದೀಗ ದೇಶದ ಮಹಾಮಂತ್ರವಾಗಿದೆ ಎಂದು ಘೋಷಿಸಿದ್ದಾರೆ.
ಹೊಸದಿಲ್ಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, “ಹರ್ಯಾಣದ ನಂತರ, ಮಹಾರಾಷ್ಟ್ರ ಚುನಾವಣೆಯಲ್ಲಿನ ಭಾರಿ ಗೆಲುವು ಒಗ್ಗಟ್ಟಿನ ಸಂದೇಶವಾಗಿದೆ. ‘ಒಂದಾಗಿದ್ದರೆ ಸುರಕ್ಷಿತರಾಗಿರುತ್ತೀರಿ’ ಎಂಬ ಘೋಷಣೆಯು ದೇಶದ ಮಹಾಮಂತ್ರವಾಗಿ ಪ್ರತಿಧ್ವನಿಸಿದೆ” ಎಂದು ಪ್ರತಿಪಾದಿಸಿದರು.
ಒಗ್ಗಟ್ಟಿನ ಭಾವನೆಯು ದೇಶವನ್ನು ಜಾತಿ, ಮತ, ಭಾಷೆ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದ್ದ ಶಕ್ತಿಗಳಿಗೆ ಭಾರಿ ಹೊಡೆತ ನೀಡಿದೆ ಎಂಬುದರತ್ತಲೂ ಅವರು ಬೊಟ್ಟು ಮಾಡಿದರು.
“ಈ ಮಂತ್ರವು ದೇಶವನ್ನು ವಿಭಜಿಸುವ ಹುನ್ನಾರ ನಡೆಸುತ್ತಿದ್ದವರಿಗೆ ಪಾಠ ಕಲಿಸಿದೆ. ಅದು ಅವರನ್ನು ಶಿಕ್ಷಿಸಿದೆ. ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳು, ದಲಿತರು ಹಾಗೂ ಸಮಾಜದ ಎಲ್ಲ ವರ್ಗಗಳೂ ಬಿಜೆಪಿ-ಎನ್ಡಿಎ ಬೆನ್ನಿಗೆ ನಿಂತಿವೆ. ಇದು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ವಿಭಜನಾಕಾರಿ ಕಾರ್ಯಸೂಚಿಗೆ ಬಿದ್ದಿರುವ ಶಕ್ತಿಶಾಲಿ ಹೊಡೆತವಾಗಿದೆ” ಎಂದೂ ಅವರು ಹೇಳಿದರು.
ಶನಿವಾರ ಪ್ರಕಟವಾದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಭಾರಿ ಬಹುಮತ ಗಳಿಸಿದೆ. ಈ ನಡುವೆ, ಮಹಾರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿಯುವ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿಯ ಕನಸು ಭಗ್ನವಾಗಿದೆ.