ಕಾಟ್ರಾದಲ್ಲಿ ಮುಷ್ಕರದ ಬಿಸಿ: ವೈಷ್ಣೋದೇವಿ ಯಾತ್ರಿಗಳಿಗೆ ಸಂಕಷ್ಟ
Update: 2024-11-24 03:58 GMT
ಜಮ್ಮು: ವೈಷ್ಣೋದೇವಿ ಮಂದಿರದ ಮುಖ್ಯದ್ವಾರ ಎನಿಸಿದ ಕಾಟ್ರಾದಲ್ಲಿ ಪೋನಿವಾಲಾಗಳು, ಅಂಗಡಿ ಮಾಲೀಕರು ಮತ್ತು ಇತರ ವ್ಯವಹಾರಗಳ ಮಾಲೀಕರು ನಡೆಸುತ್ತಿರುವ 72 ಗಂಟೆಗಳ ಮುಷ್ಕರ ಶನಿವಾರ ಎರಡನೇ ದಿನಕ್ಕೆ ತಲುಪಿದ್ದು, ತ್ರಿಕೂಟ ಪರ್ವತದಲ್ಲಿರುವ ಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನಾನುಕೂಲವಾಯಿತು ಹಾಗೂ ಯಾತ್ರಿಗಳು ತೀವ್ರ ಸಂಕಷ್ಟದಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಯಿತು.
ವೈಷ್ಣೋದೇವಿ ಮಂದಿರದ ಬೇಸ್ ಕ್ಯಾಂಪ್ ಎನಿಸಿದ ಕಾಟ್ರಾ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಬಂದ್ ಕರೆಗೆ ಸ್ಪಂದಿಸಿ ಯಾತ್ರಾ ಮಾರ್ಗದಲ್ಲಿ ಎಲ್ಲ ವಹಿವಾಟುಗಳನ್ನು ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂದಿರಕ್ಕೆ ತೆರಳುವ 12 ಕಿಲೋಮೀಟರ್ ಮಾರ್ಗದಲ್ಲಿ ತಾರಾಕೋಟ್ ಮಾರ್ಗದಿಂದ ಸಂಜಿ ಛಾತ್ವರೆಗೆ ರೋಪ್ ವೇ ಆರಂಭಿಸುವ ಯೋಜನೆಗೆ ಶ್ರೀಮಾತಾ ವೈಷ್ಣೋದೇವಿ ಮಂದಿರ ಮಂಡಳಿ ಶುಕ್ರವಾರ ಅನುಮತಿ ನೀಡಿದ ಬೆನ್ನಲ್ಲೇ ಬಂದ್ ಕರೆ ನೀಡಲಾಗಿತ್ತು.