ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ: ದುಡ್ಡೇ ದೊಡ್ಡಪ್ಪ
ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದಾಗ ಒಂದು ಸಮಾನ ಅಂಶ ಎರಡೂ ರಾಜ್ಯಗಳಲ್ಲಿ ಪಕ್ಷಗಳಿಗೆ ಜಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಎರಡೂ ರಾಜ್ಯಗಳಲ್ಲಿ ನೇರ ವರ್ಗಾವಣೆ ಭರವಸೆ ಮತದಾರರನ್ನು ಓಲೈಸುವಲ್ಲಿ ಪ್ರಮುಖ ಅಂಶ ಎನಿಸಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಕೂಟದ ಲಡ್ಕಿ ಬಹಿನ್ ಹಾಗೂ ಜಾರ್ಖಂಡ್ ನಲ್ಲಿ ಮಯ್ಯಾ ಸಮ್ಮಾನ್ ಯೋಜನಾ ಆಡಳಿತಾರೂಢ ಪಕ್ಷಗಳಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಕೊಟ್ಟಿವೆ.
ಎನ್ ವೈಎಐ ಯೋಜನೆಯ ವಿರುದ್ಧದ ಅಸ್ತ್ರವಾಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಂ-ಕಿಸಾನ್ ಕೆಲಸ ಮಾಡಿದ್ದರೆ, ಮಹಿಳೆಯರ ಬಗೆಗಿನ ಗಮನ ಉಭಯ ಪಕ್ಷಗಳ ಪ್ರಮುಖ ಅಸ್ತ್ರ ಎನಿಸಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಕೂಟ ಲಡ್ಕಿ ಬಹಿನ್ ಭತ್ಯೆಯನ್ನು ಮಾಸಿಕ 1500 ರೂಪಾಯಿಯಿಂದ 2100 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದರೆ, ಜಾರ್ಖಂಡ್ ನಲ್ಲಿ ಜೆಎಂಎಂ ಇದನ್ನು 1000 ರೂಪಾಯಿಯಿಂದ 2500 ರೂಪಾಯಿಗೆ ಹೆಚ್ಚಿಸುವ ಆಶ್ವಾಸನೆ ನೀಡಿತ್ತು.
ಈ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದ್ದು, ಮಹಾರಾಷ್ಟ್ರದಲ್ಲಿ ಅಧಿಕ ಪಿಂಚಣಿ ಮತ್ತು ಇತರ ಭರವಸೆಗಳನ್ನು ಈಡೇರಿಸಿ ಬಡ ಫಲಾನುಭವಿಗಳಿಗೆ ನೀಡುವ ನೆರವಿನಿಂದ ರಾಜ್ಯ ಬೊಕ್ಕಸಕ್ಕೆ ಮಾಸಿಕ 5000 ಕೋಟಿ ರೂಪಾಯಿ ಹೊರೆ ಬೀಳಲಿದೆ. ಜಾರ್ಖಂಡ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಖನಿಜಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಇರುವುದರಿಂದ ದೊಡ್ಡ ಹೊರೆಯಾಗದು ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ವಾರ್ಷಿಕ ಯೋಜನಾ ವೆಚ್ಚ 60 ಸಾವಿರ ಕೋಟಿ ರೂಪಾಯಿಗಳಾಗಿದ್ದು, 48 ಲಕ್ಷ ಮಹಿಳಾ ಫಲಾನುಭವಿಗಳಿಗೆ ಮಾಸಿಕ ಭತ್ಯೆ ಹೆಚ್ಚಿಸುವುದರಿಂದ ಒಟ್ಟು 14400 ಕೋಟಿ ರೂಪಾಯಿ ಹೊರೆಯಾಗಲಿದೆ. ಹೀಗೆ ಮಹಿಳಾ ಮತದಾರರನ್ನು ಮತ್ತು ನಿರ್ದಿಷ್ಟ ಮಹಿಳಾ ಗುಂಪುಗಳನ್ನು ಓಲೈಸುವ ಬಿಜೆಪಿ ತಂತ್ರ, ಕೇಸರಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದೆ.