ಮಹಾರಾಷ್ಟ್ರದಲ್ಲಿ MVA ಕಳಪೆ ಪ್ರದರ್ಶನ | ʼಅನರ್ಹತೆ ನಿರ್ಧರಿಸದʼ ಮಾಜಿ ಸಿಜೆಐ ಚಂದ್ರಚೂಡ್ ವಿರುದ್ಧ ಸಂಜಯ್ ರಾವತ್ ವಾಗ್ಧಾಳಿ

Update: 2024-11-24 16:40 IST
ಮಹಾರಾಷ್ಟ್ರದಲ್ಲಿ MVA ಕಳಪೆ ಪ್ರದರ್ಶನ | ʼಅನರ್ಹತೆ ನಿರ್ಧರಿಸದʼ ಮಾಜಿ ಸಿಜೆಐ ಚಂದ್ರಚೂಡ್ ವಿರುದ್ಧ ಸಂಜಯ್ ರಾವತ್ ವಾಗ್ಧಾಳಿ

Photo:PTI

  • whatsapp icon

ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸೋಲಿನ ಬೆನ್ನಲ್ಲೇ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿರುದ್ಧ ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ವಾಗ್ಧಾಳಿ ನಡೆಸಿದ್ದು, ʼಅನರ್ಹತೆ ನಿರ್ಧರಿಸದೆʼ ಪಕ್ಷಾಂತರಿಗಳಿಗೆ ಧೈರ್ಯ ತುಂಬಿದ್ದಾರೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪಕ್ಷಾಂತರಿಗಳಿಗೆ ಕಾನೂನಿನ ಭಯವಿಲ್ಲದಂತೆ ಮಾಡಿದ್ದಾರೆ, ಅವರ ಹೆಸರನ್ನು ಇತಿಹಾಸದಲ್ಲಿ ʼಕಪ್ಪು ಅಕ್ಷರʼಗಳಲ್ಲಿ ಬರೆಯಲಾಗುವುದು. ಅನರ್ಹತೆ ಕುರಿತು ನಿರ್ಧರಿಸದೆ ಚಂದ್ರಚೂಡ್ ಪಕ್ಷಾಂತರಕ್ಕೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟಿದ್ದಾರೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಉದ್ಧವ್ ನೇತೃತ್ವದ ಶಿವಸೇನೆ ಸ್ಪರ್ಧಿಸಿದ್ದ 95 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ. 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಸಾಧಿಸಿದೆ. ಶರದ್ ಪವಾರ್ ಅವರ ಎನ್ಸಿಪಿ(ಎಸ್ಪಿ) ಕೇವಲ 10 ಸ್ಥಾನಗಳಲ್ಲಿ ಮಾತ್ರ ಗೆದ್ದುಕೊಂಡಿತ್ತು.

2022ರಲ್ಲಿ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಶಿವಸೇನೆಯನ್ನು ಇಬ್ಬಾಗ ಮಾಡಿ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ ಜೊತೆಗೆ ಸೇರಿ ಸರಕಾರವನ್ನು ರಚಿಸಿದ್ದರು. ಶಾಸಕರ ಪಕ್ಷಾಂತರವನ್ನು ಪ್ರಶ್ನಿಸಿ ಠಾಕ್ರೆ ನ್ಯಾಯಾಲಯದ ಮೊರೆ ಹೋದಾಗ, ʼಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧರಿಸುವ ಜವಾಬ್ದಾರಿ ವಿಧಾನಸಭಾ ಸ್ಪೀಕರ್ ಅವರಿಗಿರುವುದುʼ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸ್ಪೀಕರ್ ರಾಹುಲ್ ನಾರ್ವೇಕರ್ ನಂತರ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News