ಉತ್ತರ ಪ್ರದೇಶ | ಲೈಂಗಿಕ ಶೋಷಣೆಯ ಆರೋಪ ಹೊರಿಸಿದ ಚಿತ್ರನಟಿ ; ಬಿಜೆಪಿ ಸಹರಣ್ಪುರ ಅಧ್ಯಕ್ಷನ ರಾಜೀನಾಮೆ
ಸಹರಣ್ಪುರ (ಉತ್ತರ ಪ್ರದೇಶ) : ಲೈಂಗಿಕ ಶೋಷಣೆ ನಡೆಸಿದ್ದಾರೆಂದು ಸಿನೆಮಾ ನಟಿಯೊಬ್ಬಳ ತನ್ನ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಬಿಜೆಪಿಯ ನಗರ ಘಟಕದ ಅಧ್ಯಕ್ಷ ಪುನೀತ್ ತ್ಯಾಗಿ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ.
ತನ್ನ ಮೇಲೆ ನಟಿಯು ಮಾಡಿದ ಆರೋಪಗಳನ್ನು ತ್ಯಾಗಿ ಬಲವಾಗಿ ತಳ್ಳಿಹಾಕಿದ್ದಾರೆ. ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ತಾನು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಪುನೀತ್ ತ್ಯಾಗಿ ಅವರು ತನ್ನ ರಾಜೀನಾಮೆ ಪತ್ರವನ್ನು ಬಿಜೆಪಿ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಚೌಧುರಿ ಭೂಪೇಂದ್ರ ಸಿಂಗ್ ಅವರಿಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಪ್ರಾದೇಶಿಕ ಭಾಷೆಯ 250ಕ್ಕೂ ಅಧಿಕ ಚಿತ್ರಗಳಲ್ಲಿ ತಾನು ನಟಿಸಿರುವುದಾಗಿ ಹೇಳಿಕೊಂಡಿರುವ ಮುಂಬೈ ಮೂಲದ ಈ ನಟಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ವೀಡಿಯೊದಲ್ಲಿ, ಪುನೀತ್ ತ್ಯಾಗಿ ದೀರ್ಘ ಸಮಯದಿಂದ ತನ್ನ ಲೈಂಗಿಕ ಶೋಷಣೆ ನಡೆಸಿದ್ದು, ತನ್ನ ಮಾನಸಿಕ ಯಾತನೆಗೆ ಕಾರಣನಾಗಿದ್ದಾನೆಂದು ಆರೋಪಿಸಿದ್ದರು.
ಬಿಜೆಪಿ ನಾಯಕನು ನನ್ನ ಪುತ್ರನಿಗೆ ಆಗಾಗ್ಗೆ ಉಡುಗೊರೆಗಳನ್ನು ನೀಡುವ ಮೂಲಕ ಬಾಂಧವ್ಯವನ್ನ್ನು ಬೆಳೆಸಿಕೊಂಡಿದ್ದನು. ಆನಂತರ ನನಗೆ ಪುಷ್ಪಗುಚ್ಛಗಳು ಮತ್ತಿತರ ಉಡುಗೊರೆಗಳನ್ನು ಕಳುಹಿಸಲಾರಂಭಿಸಿದ್ದ. ನನ್ನ ಪತಿಯ ಜೊತೆ ಸಂಬಂಧವನ್ನು ಕಡಿದುಕೊಂಡ ಬಳಿಕ ನಾನು ಮುಂಬೈನಲ್ಲಿ ನೆಲೆಸಿದ್ದೆ. ನನ್ನ ಪುತ್ರನ ಜೊತೆ ಬಿಜೆಪಿ ನಾಯಕನ ಆತ್ಮೀಯತೆ ಹಾಗೂ ಸದ್ವರ್ತನೆಯು, ನಾನು ಜೀವನದಲ್ಲಿ ಆಸರೆಯನ್ನು ಕಂಡುಕೊಂಡೆ ಎಂಬುದಾಗಿ ಯೋಚಿಸುವಂತೆ ಮಾಡಿತು. ಕೆಲವು ತಿಂಗಳುಗಳ ಕಾಲ ನಮ್ಮಿಬ್ಬರ ನಡುವೆ ನಿಕಟವಾದ ಸಂಬಂಧವಿತ್ತು. ಕ್ರಮೇಣ ಆತ ನನ್ನಿಂದ ದೂರವಾದ ಎಂದು ನಟಿಯು ವೀಡಿಯೋದಲ್ಲಿ ದೂರಿದ್ದಾಳೆಂದು ಇಂಡಿಯನ್ ಎಕ್ಸ್ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ನಾನು ತ್ಯಾಗಿ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ, ಪ್ರದಾನಿ ಹಾಗೂ ಬಿಜೆಪಿಯ ಉನ್ನತ ನಾಯಕರಿಗೆ ದೂರು ನೀಡಿರುವುದಾಗಿಯೂ ನಟಿ ತಿಳಿಸಿದ್ದಾರೆ.