ಅಪಹೃತ ಮೈತೈ ಕುಟುಂಬದ ಸದಸ್ಯರ ಸಾವಿಗೆ ಗುಂಡೇಟು ಕಾರಣ: ಮರಣೋತ್ತರ ಪರೀಕ್ಷೆಯಿಂದ ಬಹಿರಂಗ
ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಮೈತೈ ಕುಟುಂಬದ ಮೂವರ ಮರಣೋತ್ತರ ಪರೀಕ್ಷೆ ವರದಿಗಳು,ಅವರನ್ನು ನದಿಗೆ ಎಸೆಯುವ ಮುನ್ನ ಹಲವಾರು ಬಾರಿ ಗುಂಡಿಕ್ಕಲಾಗಿತ್ತು ಎಂದು ಹೇಳಿವೆ.
ನ.11ರಂದು ಶಂಕಿತ ಕುಕಿ ಉಗ್ರರು ಜಿರಿಬಾಮ್‌ನ ಜಕುರಧೋರ್ ಕರೋಂಗ್ ಪ್ರದೇಶದಲ್ಲಿಯ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಹಿಂಸಾಚಾರದ ಬಳಿಕ ಒಂದು ಶಿಶು ಸೇರಿದಂತೆ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ನಾಪತ್ತೆಯಾಗಿದ್ದರು. ಅವರನ್ನು ಸಶಸ್ತ್ರ ಕುಕಿ-ಝೋ-ಹಮರ್‌ಗಳು ಅಪಹರಿಸಿದ್ದಾರೆ ಎಂದು ಮೈತೈ ಗುಂಪುಗಳು ಆರೋಪಿಸಿದ್ದವು.
ನ.15 ಮತ್ತು ನ.18ರಂದು ಜಿರಿ ಮತ್ತು ಬರಾಕ್ ನದಿಗಳಲ್ಲಿ ತೇಲುತ್ತಿದ್ದ ಅಪಹೃತರ ಶವಗಳು ಪತ್ತೆಯಾಗಿದ್ದವು.
ಮೂರರ ಹರೆಯದ ಚಿಂಗ್‌ಖೀಂಗ್‌ನ್ಬಾ ಸಿಂಗ್,ಆತನ ತಾಯಿ ಎಲ್.ಹೀಟೊನ್ಬಿ ದೇವಿ(25) ಮತ್ತು ಅಜ್ಜಿ ವೈ.ರಾಣಿ ದೇವಿ ಅವರ ಮರಣೋತ್ತರ ಪರೀಕ್ಷೆ ವರದಿಗಳು ಅವರಲ್ಲಿ ಪ್ರತಿಯೊಬ್ಬರ ಮೇಲೂ ಗುಂಡುಗಳನ್ನು ಹಾರಿಸಲಾಗಿತ್ತು ಎಂದು ತೋರಿಸಿವೆ.
ಸಿಂಗ್ ಗಲ್ಲದ ಮೇಲೆ ಗುಂಡಿನ ಗಾಯ ಮತ್ತು ಮೊಂಡಾದ ವಸ್ತುವಿನಿಂದ ಉಂಟಾದ ಗಾಯಗಳಿದ್ದವು. ದೇವಿ ಬೆನ್ನಿನಲ್ಲಿ ಎರಡು ಗುಂಡೇಟಿನ ಗಾಯಗಳಿದ್ದರೆ ವೈ.ರಾಣಿ ದೇವಿ ಅವರ ಶರೀರದಲ್ಲಿ ಐದು ಗುಂಡಿನ ಗಾಯಗಳಿದ್ದವು ಎಂದು ವರದಿಗಳು ತಿಳಿಸಿವೆ.
ಈ ತಿಂಗಳು ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು, ನ.7ರಿಂದ ಕನಿಷ್ಠ 22 ಜನರು ಕೊಲ್ಲಲ್ಪಟ್ಟಿದ್ದಾರೆ.
ಈ ಅಪಹರಣಗಳ ಬಳಿಕ ನ.16ರಂದು ಮಣಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು ಗುಂಪುಗಳು ಶಾಸಕರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದವು. ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳ ಮೇಲೂ ದಾಳಿಗಳು ನಡೆದಿದ್ದವು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.