ಮಹಾರಾಷ್ಟ್ರದಲ್ಲಿ ಮರು ಚುನಾವಣೆಗೆ ಆಗ್ರಹಿಸಿದ ಸಂಜಯ್ ರಾವತ್
ಮುಂಬೈ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ಮತದಾನದ ಸಂದರ್ಭ ಇವಿಎಂನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ರಾಜ್ಯದಲ್ಲಿ ಮತಪತ್ರಗಳನ್ನು ಬಳಸಿ ಮರು ಮತದಾನ ನಡೆಸುವಂತೆ ಸೋಮವಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಇವಿಎಂಗಳ ದೋಷದ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಆರೋಪಿಸಿದರು ಹಾಗೂ ಚುನಾವಣೆಯ ಸಮಗ್ರತೆ ಬಗ್ಗೆ ಪ್ರಶ್ನಿಸಿದರು.
‘‘ಇವಿಎಂಗಳಿಗೆ ಸಂಬಂಧಿಸಿ ನಾವು ಸುಮಾರು 450 ದೂರುಗಳನ್ನು ಸ್ವೀಕರಿಸಿದ್ದೇವೆ. ಪದೇ ಪದೇ ಆಕ್ಷೇಪಗಳನ್ನು ಎತ್ತುತ್ತಿರುವ ಹೊರತಾಗಿಯೂ ಈ ಸಮಸ್ಯೆ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದುದರಿಂದ ಈ ಚುನಾವಣೆ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ನಾವು ಹೇಳುವುದು ಹೇಗೆ ? ಆದುದರಿಂದ ಫಲಿತಾಶವನ್ನು ಬದಿಗಿರಿಸಬೇಕು ಹಾಗೂ ಮತ ಪತ್ರಗಳನ್ನು ಬಳಸಿ ಮತ್ತೆ ಮತದಾನ ನಡೆಸಬೇಕು ಎಂದು ನಾನು ಆಗ್ರಹಿಸುತ್ತೇನೆ’’ ಎಂದು ರಾವತ್ ಹೇಳಿದರು.
ಕೆಲವು ನಿದರ್ಶನಗಳನ್ನು ಉಲ್ಲೇಖಿಸಿದ ಅವರು, ನಾಸಿಕ್‌ನ ಅಭ್ಯರ್ಥಿಗೆ ಅವರ ಕುಟುಂಬದ 65 ಮತಗಳು ಸಿಗಬೇಕಿತ್ತು. ಆದರೆ, ಸಿಕ್ಕಿರುವುದು ಕೇವಲ 4 ಮತಗಳು. ಡೊಂಬಿವಿಲಿಯಲ್ಲಿ ಇವಿಎಂ ಮತಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಚುನಾವಣಾಧಿಕಾರಿಗಳು ಈ ಆಕ್ಷೇಪಗಳನ್ನು ಅಂಗೀಕರಿಸಲು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲವು ಅಭ್ಯರ್ಥಿಗಳ ಪ್ರಚಂಡ ಗೆಲುವಿನ ವಿಶ್ವಾಸಾರ್ಹತೆ ಕುರಿತು ಕೂಡ ಪ್ರಶ್ನಿಸಿದ ರಾವತ್, 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಲು ಅವರು ಯಾವ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ? ಇತ್ತೀಚೆಗೆ ಪಕ್ಷಕ್ಕೆ ಸೇರಿದ ನಾಯಕರು ಕೂಡ ಶಾಸಕರಾಗಿದ್ದಾರೆ. ಇದು ಸಂಶಯಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಇವಿಎಂ ಕುರಿತು ಶರದ್ ಪವಾರ್‌ರಂತಹ ಹಿರಿಯ ನಾಯಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಆದುದರಿಂದ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.