ದಾವೂದು ಇಬ್ರಾಹಿಂ ಬೆದರಿಕೆಯೇ ನಾನು ಭಾರತ ತೊರೆಯಲು ಕಾರಣ: ಲಲಿತ್ ಮೋದಿ
ಹೊಸದಿಲ್ಲಿ: ನಾನು 2010ರಲ್ಲಿ ಭಾರತ ತೊರೆದಿದ್ದು ಕಾನೂನು ಸಮಸ್ಯೆಗಳಿಂದಲ್ಲ; ಬದಲಿಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ಜೀವ ಬೆದರಿಕೆ ಹಾಕಿದ ಕಾರಣಕ್ಕೆ ಎಂದು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಬಹಿರಂಗಗೊಳಿಸಿದ್ದಾರೆ. ಅವರು ಈ ಹೇಳಿಕೆಯನ್ನು ರಾಜ್ ಶಮಾನಿಯ ‘Figuring Out’ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ನೀಡಿದ್ದಾರೆ.
“ನಾನು ಜೀವ ಬೆದರಿಕೆಯನ್ನು ಸ್ವೀಕರಿಸಿದ್ದರಿಂದ ನಾನು ದೇಶ ತೊರೆದೆ” ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. “ಆರಂಭದಲ್ಲಿ ಯಾವುದೇ ಕಾನೂನು ಸಮಸ್ಯೆಗಳು ನನಗೆ ದೇಶ ತೊರೆಯುವಂಥ ಪರಿಸ್ಥಿತಿ ಸೃಷ್ಟಿಸಲಿಲ್ಲ. ಆದರೆ, ನಾನು ದಾವೂದ್ ಇಬ್ರಾಹಿಂನಿಂದ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದೆ. ದಾವೂದ್ ಇಬ್ರಾಹಿಂ ನನ್ನ ಬೆನ್ನು ಬಿದ್ದಿದ್ದ. ನಾನು ಮ್ಯಾಚ್ ಫಿಕ್ಸಿಂಗ್ ಮಾಡಬೇಕೆಂದು ಆತ ಬಯಸುತ್ತಿದ್ದ. ಆದರೆ, ನಾನು ಮ್ಯಾಚ್ ಫಿಕ್ಸಿಂಗ್ ಗೆ ಸಿದ್ಧನಿರಲಿಲ್ಲ. ನನಗೆ ಭ್ರಷ್ಟಾಚಾರ ವಿರೋಧಿ ಅಭಿಯಾನ ತುಂಬಾ ಮುಖ್ಯವಾಗಿತ್ತು ಹಾಗೂ ಪಂದ್ಯದ ಸಮಗ್ರತೆ ನನಗೆ ಬಹಳ ಮುಖ್ಯವಾಗಿತ್ತು” ಎಂದು ಲಲಿತ್ ಮೋದಿ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗಾಗಿ ವಿಐಪಿ ನಿರ್ಗಮನವನ್ನು ಬಳಸುವಂತೆ ನನ್ನ ಅಂಗರಕ್ಷಕ ನನ್ನನ್ನು ಒತ್ತಾಯಿಸಿದ. ನಾನು ಹಿಟ್ ಲಿಸ್ಟ್ ನಲ್ಲಿದ್ದೇನೆ ಹಾಗೂ ನನಗೆ ಕೇವಲ 12 ಗಂಟೆಗಳ ಕಾಲ ಮಾತ್ರ ಭದ್ರತೆಯ ಭರವಸೆ ನೀಡಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ ನಂತರ, ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು ಎಂದು ಅವರು ಹೇಳಿದ್ದಾರೆ.
“ಪೊಲೀಸ್ ಉಪ ಆಯುಕ್ತ ಹಿಮಾಂಶು ರಾಯ್ ನನಗಾಗಿ ವಿಮಾನ ನಿಲ್ದಾಣದ ಬಳಿ ಕಾಯುತ್ತಿದ್ದರು. ನಾವಿನ್ನು ನಿಮ್ಮನ್ನು ರಕ್ಷಿಸಲು ಸಾಧ್ಯಪವಿಲ್ಲ. ನಿಮ್ಮ ಜೀವಕ್ಕೆ ಅಪಾಯವಿದೆ. ನಾವು ಮುಂದಿನ 12 ಗಂಟೆಗಳ ಕಾಲ ಮಾತ್ರ ನಿಮಗೆ ಸುರಕ್ಷತೆಯ ಖಾತರಿ ನೀಡಬಲ್ಲೆವು ಎಂದು ಹೇಳಿದರು. ನಂತರ, ಅಲ್ಲಿಂದ ನನ್ನನ್ನು ಬೆಂಗಾವಲಿನೊಂದಿಗೆ ಮಂಬೈನಲ್ಲಿನ ಫೋರ್ ಸೀಸನ್ಸ್ ಹೋಟೆಲ್ ಗೆ ಕರೆದೊಯ್ಯಲಾಯಿತು” ಎಂದೂ ಲಲಿತ್ ಮೋದಿ ಹೇಳಿದ್ದಾರೆ.
ಇದೇ ವೇಳೆ, ನಾನು ಯಾವಾಗ ಬೇಕಾದರೂ ಭಾರತಕ್ಕೆ ಮರಳಬಹುದು ಎಂದು ಲಲಿತ್ ಮೋದಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಐಪಿಎಲ್ ಕ್ರೀಡಾಕೂಟದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಬೆನ್ನಿಗೇ, 2010ರಲ್ಲಿ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಇದಾದ ನಂತರ, ಅವರು ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿಲ್ಲ.