ಇವಿಎಂ ದಕ್ಷತೆಯ ಬಗ್ಗೆ ಯಾವುದೇ ಅನುಮಾನವಿಲ್ಲ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ

Update: 2024-11-25 17:24 GMT

 ಕಾರ್ತಿ ಚಿದಂಬರಂ | PC : PTI 

ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರಗಳ (EVM) ದಕ್ಷತೆಯ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಎಂದು ಸೋಮವಾರ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ. ಮಹಾಯುತಿ ಮೈತ್ರಿಕೂಟದ ಬಿಜೆಪಿ ಹಾಗೂ ಇನ್ನಿತರ ಪಕ್ಷಗಳು ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಿವೆ ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಸೇರಿದಂತೆ ಮಹಾವಿಕಾಸ್ ಅಘಾಡಿಯ ಹಲವು ನಾಯಕರು ಆರೋಪಿಸಿದ ಬೆನ್ನಿಗೇ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

“ನಾನು 2004ರಿಂದಲೂ ಇವಿಎಂ ಬಳಕೆಯ ಚುನಾವಣೆಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಯಾವುದೇ ಕೆಟ್ಟ ಅನುಭವವಾಗಿಲ್ಲ. ಅಥವಾ ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಿರುವುದನ್ನು ಅಥವಾ ಹಸ್ತಕ್ಷೇಪ ಮಾಡಿರುವುದನ್ನು ಸಾಬೀತು ಪಡಿಸಲು ನನ್ನ ಬಳಿ ಯಾವುದೇ ಪುರಾವೆಯಿಲ್ಲ. ಒಂದು ವೇಳೆ ಬೇರೆ ಯಾರಿಗಾದರೂ ವಿದ್ಯುನ್ಮಾನ ಮತ ಯಂತ್ರಗಳ ದಕ್ಷತೆಯ ಬಗ್ಗೆ ಅನುಮಾನಗಳಿದ್ದರೆ, ಅವರು ನಿಜಕ್ಕೂ ಹೇಳಬೇಕಿದೆ. ಆದರೆ, ನನಗೆ ವಿದ್ಯುನ್ಮಾನ ಮತ ಯಂತ್ರಗಳ ದಕ್ಷತೆಯ ಸದೃಢತೆ ಬಗ್ಗೆ ವೈಯಕ್ತಿಕವಾಗಿ ಯಾವುದೇ ಅನುಮಾನಗಳಿಲ್ಲ” ಎಂದು ಅವರು ಹೇಳಿದ್ದಾರೆ.

ವಿದ್ಯುನ್ಮಾನ ಮತ ಯಂತ್ರ ತಿರುಚುವಿಕೆ ಕುರಿತು ವೈಜ್ಞಾನಿಕ ಪುರಾವೆ ದೊರೆಯುವವರೆಗೂ, ಈ ವಿಷಯದ ಕುರಿತ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

“ನಮ್ಮ ಪಕ್ಷದಲ್ಲಿ ಅನೇಕರಿಗೆ ಈ ಕುರಿತು ವಿಭಿನ್ನ ದೃಷ್ಟಿಕೋನಗಳಿವೆ. ಈ ಕುರಿತು ಅವರೇ ವಿವರಿಸಬೇಕಿದೆ. ಆದರೆ, ನನಗೆ ವೈಯಕ್ತಿಕವಾಗಿ ವಿದ್ಯುನ್ಮಾನ ಮತ ಯಂತ್ರಗಳ ದಕ್ಷತೆಯ ಸದೃಢತೆ ಕುರಿತು ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದಾರೆ.

ನವೆಂಬರ್ 3ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ, “ನಾವು ಈ ಜನಮತವನ್ನು ಅಂಗೀಕರಿಸುವುದಿಲ್ಲ. ಚುನಾವಣಾ ಫಲಿತಾಂಶದಲ್ಲಿ ಏನೋ ಅನುಮಾಸ್ಪದವಾದುದಿದೆ” ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಸುದ್ದಿಗಾರರಿಗೆ ತಿಳಿಸಿದ್ದರು.

ಫಲಿತಾಂಶಗಳು ಅಸ್ವೀಕಾರಾರ್ಹವಾಗಿರುವುದರಿಂದ, ಚುನಾವಣೆ ನಂತರದ ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯದಕ್ಷತೆಯ ಕುರಿತು ಚರ್ಚೆಯಾಗಬೇಕಾದ ಅಗತ್ಯವಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡಾ ಹೇಳಿದ್ದರು.

ತಮ್ಮ ಪತಿ ಚುನಾವಣೆಯಲ್ಲಿ ಪರಾಭವಗೊಂಡ ನಂತರ, ನಟಿ ಸ್ವರ ಭಾಸ್ಕರ್ ಕೂಡಾ ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯದಕ್ಷತೆ ಕುರಿತು ಪ್ರಶ್ನೆಯೆತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News