ಬಿಹಾರದಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 24 ಜನರು ಮೃತ್ಯು

Update: 2024-10-17 14:48 GMT

ಸಾಂದರ್ಭಿಕ ಚಿತ್ರ 

ಪಾಟ್ನಾ : ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಮದ್ಯ ಸೇವನೆಯಿಂದ ಸಾವುಗಳ ಸಂಖ್ಯೆ ಗುರುವಾರ 24ಕ್ಕೇರಿದೆ.

ಕನಿಷ್ಠ 20 ಜನರು ಸಿವಾನ್ ಜಿಲ್ಲೆಯಲ್ಲಿ ಮತ್ತು ನಾಲ್ವರು ನೆರೆಯ ಸರನ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ 2016, ಎಪ್ರಿಲ್ನಿಂದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಆದರೂ ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ಮತ್ತು ಸಾಯುತ್ತಿರುವ ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇವೆ.

ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಅಸ್ವಸ್ಥಗೊಂಡಿರುವ 38 ಜನರನ್ನು ಜಿಲ್ಲೆಯಲ್ಲಿಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ದೃಢಪಡಿಸಿದ ಸರನ್ ಜಿಲ್ಲಾಧಿಕಾರಿ ಮುಕುಲ್ ಕುಮಾರ್ ಗುಪ್ತಾ ಅವರು,ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ಹೊರಡಿಸಲಾಗಿದೆ ಎಂದು ತಿಳಿಸಿದರು.

ಘಟನೆಯ ಕುರಿತು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು,ಈ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಸರನ್ ಎಸ್ಪಿ ಕುಮಾರ್ ಆಶಿಷ್ ತಿಳಿಸಿದರು.

ಪ್ರದೇಶದಲ್ಲಿ ಕಳ್ಳಭಟ್ಟಿ ಮದ್ಯದ ಕಳ್ಳ ಸಾಗಣೆಯ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಭಗವಾನಪುರ ಹಾತ್ ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಸಿವಾನ್ ಎಸ್ಪಿ ಅಮಿತೇಶ್ ಕುಮಾರ್ ಹೇಳಿದರು.

ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 25 ಜನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರನ್ನು ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿವಾನ್ ಸಿವಿಲ್ ಸರ್ಜನ್ ಡಾ.ಶ್ರೀನಿವಾಸ್ ಪ್ರಸಾದ್ ಸುದ್ದಿಸಂಸ್ಥೆಗೆ ತಿಳಿಸಿದರು.

ಅಧಿಕೃತ ಅಂಕಿಅಂಶಗಳನ್ನು ತಳ್ಳಿಹಾಕಿದ ಸಿವಾನ್ ಕೌನ್ಸಿಲರ್ ಸುಶೀಲ್ ಕುಮಾರ್ ಡಬ್ಲು ಅವರು, ವಿಷಪೂರಿತ ಮದ್ಯ ಸೇವಿಸಿ ಸುಮಾರು 50 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿದರು.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳ್ಳಭಟ್ಟಿ ದುರಂತದ ಕುರಿತು ಉನ್ನತ ಮಟ್ಟದ ಪುನರ್ಪರಿಶೀಲನೆ ಸಭೆಯನ್ನು ನಡೆಸಿದ್ದಾರೆ. ಘಟನಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸುವಂತೆ ಮತ್ತು ಸಮಗ್ರ ತನಿಖೆಯನ್ನು ನಡೆಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಕಳ್ಳಭಟ್ಟಿ ಸೇವನೆಯಿಂದ ಸಾವುಗಳಿಗಾಗಿ ಪ್ರತಿಪಕ್ಷ ಆರ್ಜೆಡಿ ರಾಜ್ಯದ ಎನ್ಡಿಎ ಸರಕಾರವನ್ನು ದೂಷಿಸಿದೆ.

2022, ಡಿಸೆಂಬರ್ನಲ್ಲಿ ಸರನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ 38 ಜನರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News