ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ವರ್ಷದ 15ನೇ ಪ್ರಕರಣ

Update: 2024-10-18 02:25 GMT

ಕೋಟಾ: ಉತ್ತರ ಪ್ರದೇಶದ ಮಿರ್ಜಾಪುರ ಮೂಲದ 20 ವರ್ಷ ವಯಸ್ಸಿನ ವೈದ್ಯಕೀಯ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿ ಬುಧವಾರ ರಾತ್ರಿ ತನ್ನ ಪಿಜಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾಗಿರುವ ಅಶುತೋಷ್ ಚೌರಾಸಿಯಾ ಎಂಬ ವಿದ್ಯಾರ್ಥಿ ನರಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದು ಇಲ್ಲಿನ ಕೋಚಿಂಗ್ ಸೆಂಟರ್ ಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ 15ನೇ ಪ್ರಕರಣವಾಗಿದೆ. ಅಶುತೋಶ್ ಹಾಗೂ ಆತನ ಸೋದರ ಸಂಬಂಧಿ ಕಳೆದ ಆರು ತಿಂಗಳಿಂದ ನೀಟ್-ಯುಜಿಗೆ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದರು. ಇಬ್ಬರೂ ಒಂದೇ ಪಿಜಿಯಲ್ಲಿ ವಾಸವಿದ್ದರು.

ಬುಧವಾರ ರಾತ್ರಿ ಬಾಗಿಲು ಬಡಿದಾಗ ಮತ್ತು ಪೋಷಕರು ದೂರವಾಣಿ ಕರೆ ಮಾಡಿದಾಗ ಈ ವಿದ್ಯಾರ್ಥಿ ಸ್ಪಂದಿಸದೇ ಇದ್ದಾಗ, ಪಿಜಿಯ ಉಸ್ತುವಾರಿ ನಡೆಸುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದರು. ಅಶುತೋಷ್ ನ ಸೋದರ ಸಂಬಂಧಿ ಹಾಗೂ ಪೋಷಕರನ್ನು ಉದ್ದೇಶಿಸಿ ಬರೆದಿದ್ದ ಎರಡು ಪ್ರತ್ಯೇಕ ಆತ್ಮಹತ್ಯೆ ಟಿಪ್ಪಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನರಸಂಬಂಧಿ ಸಮಸ್ಯೆಗಳ ಜತೆ ತನ್ನ ಹೋರಾಟವನ್ನು ವಿದ್ಯಾರ್ಥಿ ಇದರಲ್ಲಿ ತಿಳಿಸಿದ್ದಾನೆ. ಈ ಟಿಪ್ಪಣಿಯ ಇತರ ಮಾಹಿತಿಗಳನ್ನು ತಡೆಹಿಡಿಯಲಾಗಿದ್ದು, ಇದು ತನಿಖೆಯ ಭಾಗ ಎಂದು ಡಿವೈಎಸ್ಪಿ ಯೋಗೀಶ್ ಶರ್ಮಾ ಹೇಳಿದ್ದಾರೆ.

ಕಳೆದ ವರ್ಷ ನೀಟ್ ಸಿದ್ಧತೆಗಾಗಿ ಅಶುತೋಷ್ ಕೋಟಾಗೆ ಆಗಮಿಸಿದ್ದ. ಆದರೆ ಐದಾರು ದಿನಗಳಲ್ಲಿ ವಾಪಸ್ಸಾಗಿ, ಆರು ತಿಂಗಳ ಹಿಂದೆ ಮತ್ತೆ ತೆರಳಿದ್ದ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News