ಪ್ರಧಾನಿ ಕಚೇರಿಯ ಬಲವಂತಕ್ಕೆ ಹಿರಾನಂದಾನಿಯಿಂದ ಅಫಿಡಾವಿಟ್‌ಗೆ ಸಹಿ: ಮಹುವಾ ಮೊಯಿತ್ರಾ ಆರೋಪ
ಹೊಸದಿಲ್ಲಿ : ‘ಹಣಕ್ಕಾಗಿ ಪ್ರಶ್ನೆ’ ವಿವಾದದಲ್ಲಿ ಸಿಲುಕಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಅಫಿಡಾವಿಟ್’ ‘ಜೋಕ್’ ಎಂದು ಹೇಳಿದ್ದಾರೆ. ಅಫಿಡಾವಿಟ್‌ಗೆ ಸಹಿ ಮಾಡಲು ಹಿರಾನಂದಾನಿ ಅವರಿಗೆ ಪ್ರಧಾನ ಮಂತ್ರಿ ಕಚೇರಿ ಬಲವಂತ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಹಿರಾನಂದಾನಿ ಅವರು ಸಹಿ ಮಾಡಿದ ಅಫಿಡಾವಿಟ್ ಗುರುವಾರ ಸಂಜೆ ಸೋರಿಕೆಯಾಗಿದ್ದು, ಅದಾನಿ ಅವರನ್ನು ಗುರಿಯಾಗಿರಿಸಿ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರ ಸಂಸದೀಯ ಲಾಗಿನ್‌ನ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಬಳಸಿರುವುದನ್ನು ಹಿರಾನಂದಾನಿ ಒಪ್ಪಿಕೊಂಡಿದ್ದರು.
ಆದರೆ, ಅಫಿಡಾವಿಟ್ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೊಯಿತ್ರಾ, ಅಫಿಡಾವಿಟ್ ಅನ್ನು ಲೆಟರ್‌ಹೆಡ್‌ನಲ್ಲಿ ಬರೆಯದೆ ಬಿಳಿ ಕಾಗದದ ಮೇಲೆ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಯಾವುದೇ ತನಿಖಾ ಸಂಸ್ಥೆ ಕೂಡ ಹಿರಾನಂದಾನಿ ಅವರಿಗೆ ಸಮನ್ಸ್ ನೀಡಿಲ್ಲ. ಹಾಗಾದರೆ, ಅವರು ಈ ಅಫಿಡಾವಿಟ್ ಅನ್ನು ಯಾರಿಗೆ ನೀಡಿದ್ದಾರೆ ಎಂದು ಮೊಯಿತ್ರಾ ಅವರು ‘x’ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಅತಿ ಗೌರವಾನ್ವಿತ, ವಿದ್ಯಾವಂತ ಉದ್ಯಮಿಯ ತಲೆಗೆ ಬಂದೂಕು ಇರಿಸಿದ ಹೊರತು ಬಿಳಿ ಕಾಗದದ ಮೇಲೆ ಈ ರೀತಿಯ ಪತ್ರಕೆ ಯಾಕೆ ಸಹಿ ಹಾಕುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಪತ್ರದ ವಿಷಯ ತಮಾಷೆಯಾಗಿದೆ. ಇದನ್ನು ಪ್ರಧಾನಿ ಅವರ ಕಚೇರಿಯಲ್ಲಿ ಯಾರೋ ರಚಿಸಿಬೇಕು ಎಂದು ಮಹುವಾ ಮೊಯಿತ್ರಾ ಅವರು ಹೇಳಿದ್ದಾರೆ.
ಈ ನಡುವೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಯಾವುದೇ ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುವುದರಿಂದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ನ್ಯಾಯವಾದಿ ಹಾಗೂ ಹಲವು ಮಾಧ್ಯಮ ಸಂಸ್ಥೆಗಳಿಗೆ ತಡೆ ಆದೇಶ ನೀಡುವಂತೆ ಕೋರಿ ದಿಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಹುವಾ ಮೊಯಿತ್ರಾ ಅವರ ನ್ಯಾಯವಾದಿ ಶುಕ್ರವಾರ ಹಿಂಪಡೆದಿದ್ದಾರೆ.