ಹಣ ಅಕ್ರಮ ವರ್ಗಾವಣೆ ಪ್ರಕರಣ: ಈ.ಡಿ. ಮುಂದೆ ಹಾಜರಾದ ಕಾರ್ತಿ ಚಿದಂಬರಂ
ಹೊಸದಿಲ್ಲಿ: ಕೆಲವು ಚೀನಾ ಪ್ರಜೆಗಳಿಗೆ ವೀಸಾ ನೀಡಿರುವುದಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಶನಿವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ಸಿಬಿಐ ದಾಖಲಿಸಿದ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ದಾಖಲಿಸಿಕೊಂಡಿತು.
ಜಾರಿ ನಿರ್ದೇಶನಾಲಯದ ತನಿಖೆ ಅಸಂಬದ್ಧವಾಗಿದೆ ಹಾಗೂ ತಾನು ಜಾರಿ ನಿರ್ದೇಶನಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿರುವುದಾಗಿ ಅವರು ಈ ಹಿಂದೆ ಹೇಳಿದ್ದರು. ಡಿಸೆಂಬರ್ 12 ಹಾಗೂ 16 ರಂದು ಹಾಜರಾಗಲು ಸಾಧ್ಯವಾಗದೇ ಇರುವುದರಿಂದ ದಾಖಲೆಗಳನ್ನು ಸಂಗ್ರಹಿಸಲು ಹೆಚ್ಚುವರಿ ಸಮಯಾವಕಾಶ ನೀಡುವಂತೆ ಅವರು ಕೋರಿದ್ದರು.
ವೇದಾಂತ ಕಂಪೆನಿಗಳ ಸಮೂಹ ತಲ್ವಾಂಡಿ ಸಾಬೊ ಪವರ್ ಲಿಮಿಟೆಡ್ (ಟಿಎಸ್‌ಪಿಎಲ್)ನ ಉನ್ನತ ಅಧಿಕಾರಿಗಳು ಕಾರ್ತಿ ಚಿದಂಬರಂ ಹಾಗೂ ಭಾಸ್ಕರರಾಮನ್ ಅವರಿಗೆ 50 ಲಕ್ಷ ರೂ. ಲಂಚ ನೀಡಿರುವ ಆರೋಪಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯದ ಪ್ರಕರಣ ಇದೆಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಿದೆ.