ಬ್ಯಾಂಕ್ ಸಾಲ ಹಗರಣ: ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಮುಂಬೈ: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು 539 ಕೋಟಿ ರೂಪಾಯಿ ಕೆನರಾ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಮುಂಬೈ ಕಚೇರಿಯಲ್ಲಿ ಗೋಯಲ್ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ವಿಚಾರಣೆಯಲ್ಲಿ ಗೋಯಲ್ ಸಮರ್ಪಕವಾಗಿ ಸಹಕರಿಸಿಲ್ಲ ಎಂದು ಹೇಳಿದ್ದಾರೆ. ವಿಚಾರಣೆಗಾಗಿ ಗೋಯಲ್ ಅವರನ್ನು ದೆಹಲಿಯಿಂದ ಮುಂಬೈಗೆ ಕರೆತರಲಾಗಿದ್ದು, ಬಳಿಕ ಅವರನ್ನು ಬಂಧನದಲ್ಲಿ ಇಡಲಾಗಿದೆ. ಶನಿವಾರ ಜಾರಿ ನಿರ್ದೇಶನಾಲಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ ಎಂದು ಮೂಲಗಳು ಹೇಳಿವೆ.
ಕೆನಾರಾ ಬ್ಯಾಂಕ್ ಮೇ 3ರಂದು ಸಿಬಿಐಗೆ ನೀಡಿದ ದೂರಿನ ಆಧಾರದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜೆಟ್ ಏರ್ ವೇಸ್ 2005ರಿಂದಲೂ ಕೆನರಾ ಬ್ಯಾಂಕ್ ಜತೆ ವ್ಯವಹರಿಸುತ್ತಿದ್ದು, ಎಸ್ ಬಿಐ ನೇತೃತ್ವದ ಒಕ್ಕೂಟ ವ್ಯವಸ್ಥೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದೆ. ಗೋಯಲ್ ಪತ್ನಿ ಅನಿತಾ, ಗೌರಂಗ್ ಶೆಟ್ಟಿ ಮತ್ತು ಇತರ ಅಪರಿಚಿತರನ್ನು ಕೂಡಾ ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.
ಒಕ್ಕೂಟದಿಂದ ಪಡೆದ ಸಾಲದ ಸುಸ್ತಿಬಾಕಿಯನ್ನು ಗೋಯಲ್ ಅವರ ಕಂಪನಿಗಳು ಉಳಿಸಿಕೊಂಡಿದ್ದು, 2011ರ ಏಪ್ರಿಲ್ 1 ರಿಂದ 2019ರ ಜೂನ್ ವರೆಗೆ ಕಂಪನಿ ನಡೆಸಿದ ಎಲ್ಲ ವಹಿವಾಟುಗಳ ವಿಧಿವಿಜ್ಞಾನ ಪರಿಶೀಲನೆಯನ್ನು ಬ್ಯಾಂಕ್ ನಡೆಸಿದ್ದು, ನಿಧಿಗಳನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿರುವುದು ಮತ್ತು ವಿಮುಖಗೊಳಿಸಿರುವುದು ಪತ್ತೆಯಾಗಿದೆ. 2021ರಲ್ಲಿ ಈ ವರದಿ ಸಲ್ಲಿಕೆಯಾಗಿದೆ ಎಂದು ಕೆನರಾ ಬ್ಯಾಂಕ್ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. 2023ರ ಜುಲೈನಲ್ಲಿ ಜಾರಿ ನಿರ್ದೇಶನಾಲಯ, ಲೆಕ್ಕಪರಿಶೋಧಕ ರಾಜೇಶ್ ಚತುರ್ವೇದಿ ಅವರ ನಿವಾಸ ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿತ್ತು.