ಸಂಸತ್ ಭದ್ರತಾ ವೈಫಲ್ಯ: ಬಂಧಿತ ಇಬ್ಬರು ಮೈಸೂರು ಮೂಲದವರು
ಹೊಸದಿಲ್ಲಿ: ಸಂಸತ್ತಿನಲ್ಲಿ ಇಂದು ನಡೆದ ದೊಡ್ಡ ಭದ್ರತಾ ಲೋಪದಲ್ಲಿ ಬಂಧಿತರಾದ ಇಬ್ಬರು ವ್ಯಕ್ತಿಗಳು ಮೈಸೂರು ಮೂಲದವರೆಂದು ತಿಳಿದು ಬಂದಿದ್ದು, ಅವರನ್ನು ಸಾಗರ್ ಶರ್ಮ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ.
ಸಂಸತ್ತಿನ ಹೊರಗೆ ಹಳದಿ ಹೊಗೆಯುಗುಳುತ್ತಿದ್ದ ಕ್ಯಾನಿಸ್ಟರ್ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.
ನಾಲ್ಕು ಮಂದಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಐದು ಹಂತದ ಭದ್ರತಾ ವ್ಯವಸ್ಥೆಯನ್ನು ದಾಟಿ ಸಾಗರ್ ಮತ್ತು ಮನೋರಂಜನ್ ಅವರು ನೂತನ ಸಂಸತ್ ಕಟ್ಟಡದೊಳಗೆ ಕ್ಯಾನಿಸ್ಟರ್‌ಗಳೊಂದಿಗೆ ಹೇಗೆ ಪ್ರವೇಶಿಸಲು ಸಾಧ್ಯವಾಯಿತು ಎಂಬ ಪ್ರಶ್ನೆಯೂ ಇದೆ.
ಲೋಕಸಭೆಯ ಸಿಸಿಟಿವಿಯಿಂದ ತಿಳಿದು ಬಂದಂತೆ ಗಾಢ ನೀಲಿ ಶರ್ಟ್ ಧರಿಸಿದ ಒಬ್ಬ ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಓಡುತ್ತಿರುವಂತೆಯೇ ಇನ್ನೊಬ್ಬಾತ ಸಂದರ್ಶಕರ ಗ್ಯಾಲರಿಯಿಂದ ನೇತಾಡುತ್ತಾ ಯಾವುದೋ ಹೊಗೆ ಹಳದಿ ಹೊಗೆ ಸಿಂಪಡಿಸಿದ್ದಾನೆ.
ಲೋಕಸಭಾ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಹಿಡಿಯುವಲ್ಲಿ ಸಫಲರಾದರು. ಅವರ ಬಳಿ ಇದ್ದ ಪಾಸ್ ಗಮನಿಸಿದಾಗ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ನೀಡಿದ ಪಾಸ್‌ಗಳು ಎಂದು ತಿಳಿದು ಬಂದಿವೆ ಎಂದು ಅಮ್ರೋಹ ಸಂಸದ ದಾನಿಶ್ ಅಲಿ ಹೇಳಿದ್ದಾರೆ.
"ನಾವು ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದೇವೆ. ಶರ್ಮಾ ಮೈಸೂರು ಮೂಲದವರಾಗಿದ್ದು, ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಮತ್ತೊಬ್ಬ ಕೂಡಾ ಮೈಸೂರು ಮೂಲದವರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರೊಂದಿಗೆ ಇಂಟೆಲಿಜೆನ್ಸ್ ಬ್ಯೂರೋ ತಂಡವು ಬಂಧಿತರ ಮನೆಗಳಿಗೆ ವಿವರವಾದ ತನಿಖೆಗಾಗಿ ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸರ್ವ ಪಕ್ಷ ಸಂಸದರ ಸಭೆ ಕರೆದ ಸ್ಪೀಕರ್
ಇಂದು ಸಂಸತ್ತಿನಲ್ಲಿ ಉಂಟಾದ ಭದ್ರತಾ ಲೋಪವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಸಂಸದರ ಕಳವಳ ಮತ್ತು ಆತಂಕವನ್ನು ನಿವಾರಿಸಲು ಇಂದು ಸರ್ವ ಪಕ್ಷಗಳ ಸಂಸದರ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದರು.
ಸಂಸತ್ತು 2 ಗಂಟೆಗೆ ಸಭೆ ಸೇರಿದಂತೆ ಸಂಸದರು ಇಂದು ಬೆಳಗ್ಗಿನ ವಿದ್ಯಮಾನವನ್ನು ಉಲ್ಲೇಖಿಸಿದರಲ್ಲದೆ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ವೀಡಿಯೋ ಸಂದೇಶದಲ್ಲಿ ನೀಡಿದ ಬೆದರಿಕೆಯನ್ನು ಉಲ್ಲೇಖಿಸಿದರು. ಈ ವಿಚಾರಗಳು ಸದನದಲ್ಲಿ ಚರ್ಚಿಸುವುದು ಸೂಕ್ತವಾಗದು ಎಂದು ಸ್ಪೀಕರ್ ಹೇಳಿದರು.
ಸಂಸತ್ತಿನ ಮೇಲೆ ಉಗ್ರ ದಾಳಿ ನಡೆದ 22ನೇ ವರ್ಷ ಇಂದು ಆಗಿರುವ ಸಂದರ್ಭದಲ್ಲಿ ನಡೆದ ಇಂದಿನ ವಿದ್ಯಮಾನದಲ್ಲಿ ಇಬ್ಬರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಹಳದಿ ಹೊಗೆಯುಗುಳುತ್ತಿದ್ದ ಕ್ಯಾನಿಸ್ಟರ್‌ಗಳೊಂದಿಗೆ ಜಿಗಿದಿದ್ದರಲ್ಲದೆ ಘೋಷಣೆಗಳನ್ನೂ ಕೂಗಿದ್ದರು.