ಅಲ್ ಜಝೀರಾ ಟಿವಿ ವಾಹಿನಿಯ ಪ್ರಸಾರದ ಮೇಲೆ ನಿಷೇಧದ ಬೆನ್ನಲ್ಲೇ ಕಚೇರಿ ಮೇಲೆ ಇಸ್ರೇಲ್ ದಾಳಿ
ಗಾಜಾ: ಇಸ್ರೇಲ್‍ನಲ್ಲಿ ಅಲ್ ಜಝೀರಾ ಟಿವಿ ವಾಹಿನಿಯ ಪ್ರಸಾರದ ಮೇಲೆ ನಿಷೇಧ ವಿಧಿಸಿರುವ ಬೆನ್ನಲ್ಲೇ ಇಸ್ರೇಲಿ ಅಧಿಕಾರಿಗಳು ರವಿವಾರ ಈ ಸುದ್ದಿ ಚಾನಲ್‍ಗೆ ಸಂಬಂಧಿಸಿದ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಕತರ್ ಮೂಲದ ಟಿವಿ ವಾಹಿನಿಯನ್ನು ಮುಚ್ಚಲು ದೇಶದ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ. ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ಮೇಳೆ ಇಂಥ ದಾಳಿ ನಡೆದಿರುವುದು ಇದೇ ಮೊದಲು.
ಸಂವಹನ ಸಚಿವಾಲಯದ ಅಧೀಕ್ಷಕರು ಮತ್ತು ಪೊಲೀಸರು ಜೆರುಸಲೇಂನಲ್ಲಿರುವ ಅಲ್ ಜಝೀರಾ ಕಚೇರಿಗಳಿಗೆ ಆಗಮಿಸಿ ಎಲ್ಲ ಸಾಧನ ಸಲಕರಣೆಗಳನ್ನು ಮುಟ್ಟುಗೋಲು ಹಾಕಿಕೊಂಡರು ಹಾಗೂ ಸಂಪರ್ಕ ಕಡಿತಗೊಳಿಸಿದರು. ಇಡೀ ಇಸ್ರೇಲ್‍ನಲ್ಲಿ ಅಲ್ ಜಝೀರಾ ಪ್ರಸಾರ ಮತ್ತು ಲಭ್ಯತೆಯನ್ನು ತಡೆಯಲಾಗಿದೆ.
ಇಸ್ರೇಲ್ ಸಂಪರ್ಕ ಖಾತೆ ಸಚಿವ ಶ್ಲೋಮೊ ಕರ್ಹಿ ಈ ದಾಳಿಯ ವಿಡಿಯೊ ತುಣುಕನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್‍ನಲ್ಲಿ ಅಲ್ ಜಝೀರಾ ಪ್ರಸಾರವನ್ನು ತಡೆಯಬೇಕು ಎಂದು ಕರ್ಹಿ ಪ್ರತಿಪಾದಿಸುತ್ತಲೇ ಬಂದಿದ್ದರು. ಇಸ್ರೇಲ್‍ನ ಸರ್ಕಾರಿ ಪ್ರಸಾರ ಸಂಸ್ಥೆ ಕೂಡಾ ಪಕ್ಷಪಾತದ ವರದಿ ಮಾಡುತ್ತಿದ್ದು, ಸಂಸ್ಥೆಯ ಬಜೆಟ್ ಕಡಿತಗೊಳಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಅಲ್‍ಜಝೀರಾ, ಇಸ್ರೇಲ್ ಕ್ರಮವನ್ನು ಖಂಡಿಸಿದ್ದು, ಇದು ಮಾಹಿತಿ ಪಡೆಯುವ ಮನುಷ್ಯರ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಅಪರಾಧ ಕೃತ್ಯ ಎಂದು ಬಣ್ಣಿಸಿದೆ.