ಸುಪ್ರೀಂ ಕೋರ್ಟ್ ನಲ್ಲಿ ಆರ್ಟಿಕಲ್ 370 ಕುರಿತು ವಾದ ಮಂಡಿಸಿದ್ದ ಉಪನ್ಯಾಸಕನ ಅಮಾನತು ಆದೇಶ ಹಿಂಪಡೆದ ಜಮ್ಮು-ಕಾಶ್ಮೀರ ಸರಕಾರ
ಶ್ರೀನಗರ: ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದರ ವಿರುದ್ಧ ವಾದ ಮಂಡಿಸಿದ್ದ ಕಾಲೇಜು ಉಪನ್ಯಾಸಕರೊಬ್ಬರ ಅಮಾನತು ಆದೇಶವನ್ನು ಜಮ್ಮು-ಕಾಶ್ಮೀರ ಸರಕಾರ ಇಂದು ಹಿಂಪಡೆದಿದೆ.
ಕೇಂದ್ರದ 2019ರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದಾಗಲೇ ರಾಜ್ಯಶಾಸ್ತ್ರದ ಹಿರಿಯ ಉಪನ್ಯಾಸಕ ಝಹೂರ್ ಅಹ್ಮದ್ ಭಟ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಉಪನ್ಯಾಸಕ ಝಹೂರ್ ಅಹ್ಮದ್ ನ್ಯಾಯಾಲಯದಲ್ಲಿ ಹಾಜರಾಗಿದ್ದಕ್ಕೂ ಅವರನ್ನು ಅಮಾನತುಗೊಳಿಸುವಿಕೆಗೂ ಸಂಬಂಧವಿದೆಯೇ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಳಿತ್ತು. ಈ ರೀತಿಯ ಕ್ರಮವನ್ನು "ಪ್ರತೀಕಾರ" ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.
ಸರಕಾರದ ಉನ್ನತ ಕಾನೂನು ಅಧಿಕಾರಿ ಕೂಡ ಉಪನ್ಯಾಸಕರನ್ನು ಅಮಾನತುಗೊಳಿಸಿದ ಸಮಯ ಸರಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರಕಾರವು ರವಿವಾರದಂದು ಅಮಾನತು ಆದೇಶವನ್ನು ಹಿಂತೆಗೆದುಕೊಂಡಿತು ಹಾಗೂ ಭಟ್ ಅವರನ್ನು "ಅವರ ಮೂಲ ಪೋಸ್ಟಿಂಗ್ ಸ್ಥಳಕ್ಕೆ ಹಿಂತಿರುಗಿ" ಎಂದು ಕೇಳಿದೆ.
ಸುಪ್ರೀಂ ಕೋರ್ಟ್ ನಲ್ಲಿ ಆರ್ಟಿಕಲ್ 370 ಪ್ರಕರಣದಲ್ಲಿ ಕೇಂದ್ರವು ತನ್ನ ವಾದವನ್ನು ಮುಕ್ತಾಯಗೊಳಿಸುವ ಒಂದು ದಿನದ ಮೊದಲು ಉಪನ್ಯಾಸಕರನ್ನು ಅಮಾನತುಗೊಳಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರಿ ಆದೇಶವನ್ನು ರದ್ದುಗೊಳಿಸಿರುವುದು ಇದೇ ಮೊದಲ ನಿದರ್ಶನವಾಗಿದೆ.
ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಹಾಜರಾದ ಕೆಲವು ದಿನಗಳ ನಂತರ ಉಪನ್ಯಾಸಕರನ್ನು ಅಮಾನತುಗೊಳಿಸಿರುವ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಮಾತನಾಡುವಂತೆ ಕಳೆದ ವಾರ ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತ್ತು.