ಮಧ್ಯಪ್ರದೇಶ: ಮಾಜಿ ಆರೆಸ್ಸೆಸ್ ಸ್ವಯಂಸೇವಕರಿಂದ ಹೊಸ ರಾಜಕೀಯ ಪಕ್ಷ ಜನಹಿತ್ ಪಾರ್ಟಿ ಘೋಷಣೆ

Update: 2023-09-11 05:14 GMT

ಭೋಪಾಲ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮಾಜಿ ಸ್ವಯಂಸೇವಕರ ಗುಂಪು ಮಧ್ಯಪ್ರದೇಶದಲ್ಲಿ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷ ಜನಹಿತ್ ಪಾರ್ಟಿಯನ್ನು ರಚಿಸುವ ನಿರ್ಧಾರವನ್ನು ರವಿವಾರ ಪ್ರಕಟಿಸಿದೆ. ಈ ಹೆಜ್ಜೆಯು ಆಡಳಿತವನ್ನು ಸುಧಾರಿಸಲು ರಾಜಕೀಯ ಪಕ್ಷಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ.

"ಎಲ್ಲಾ ರಾಜಕೀಯ ಪಕ್ಷಗಳ ಸಂಸ್ಕೃತಿಯು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿರುವುದರಿಂದ ನಾವು ಜನಹಿತ್ ಪಾರ್ಟಿಯನ್ನು ರಚಿಸಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ" ಎಂದು ಮಾಜಿ ಆರೆಸ್ಸೆಸ್ ಪ್ರಚಾರಕ ಅಭಯ್ ಜೈನ್ ರಾಜ್ಯ ರಾಜಧಾನಿ ಭೋಪಾಲ್ ಬಳಿಯ ಮಿಸ್ರೋಡ್ನಲ್ಲಿ ತಮ್ಮ ಮಾಜಿ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ಇನ್ನೂ ನೋಂದಣಿಯಾಗದ ಪಕ್ಷವು ಆಡಳಿತಾರೂಢ ಬಿಜೆಪಿಯ ಮತಗಳನ್ನು ಪಡೆಯುತ್ತದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರದ ಕಾರ್ಯವೈಖರಿ ಬಗ್ಗೆ ಜನರಿಗೆ ತೃಪ್ತಿ ಇಲ್ಲ ಎಂದು ಜೈನ್ ಹೇಳಿದ್ದಾರೆ.

"ನಾವು ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡರೆ ಏನಾಗುತ್ತದೆ? ಬಿಜೆಪಿಯ ಬಗ್ಗೆ ಅಸಮಾಧಾನ ಹೊಂದಿರುವ, ಆದರೆ ಹಿಂದೂ ಮನಸ್ಥಿತಿ ಹೊಂದಿರುವವರು ನಮಗೆ ಆದ್ಯತೆ ನೀಡುತ್ತಾರೆ. ಬಿಜೆಪಿ ಐದು ಮತಗಳನ್ನು ಕಳೆದುಕೊಂಡರೆ, ರಾಜಕೀಯ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಅವುಗಳನ್ನು ಗಳಿಸುವುದಿಲ್ಲ. ನಮ್ಮ ಈ ಕ್ರಮವು ತಮ್ಮ ಆಡಳಿತವನ್ನು ಸುಧಾರಿಸಲು ರಾಜಕೀಯ ಪಕ್ಷಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ನಮಗೆ ಗೊತ್ತಿದೆ’’ ಎಂದು 60 ವರ್ಷದ ಜೈನ್ ಹೇಳಿದರು.

ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಜೈನ್, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಯೋಚಿಸುತ್ತಿದ್ದೇವೆ. ನಮ್ಮ ರಾಜಕೀಯ ಗುರಿ ದೂರದೃಷ್ಟಿಯಿಂದ ಕೂಡಿದೆ" ಎಂದು ಅವರು ಹೇಳಿದರು.

ಜಾರ್ಖಂಡ್ನ ಐವರು ಆರೆಸ್ಸೆಸ್ ಹಿನ್ನೆಲೆ ಇರುವವರು ಒಳಗೊಂಡಂತೆ 200 ಕ್ಕೂ ಹೆಚ್ಚು ಜನರು ಮಿಸ್ರೋಡ್ನಲ್ಲಿ ತಮ್ಮ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಜೈನ್ ಪಿಟಿಐಗೆ ದೂರವಾಣಿಯಲ್ಲಿ ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News