ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ 25,000 ಕೋಟಿ ರೂ. ಹಗರಣ ; ಈಡಿ ಮುಂದೆ ಹಾಜರಾದ ಶರದ್ ಪವಾರ್ ಮೊಮ್ಮಗ
ಮುಂಬೈ: ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್ ಅವರು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮುಂಬೈನ ಜಾರಿ ನಿರ್ದೇಶನಾಲಯ (ಈಡಿ)ದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು ಕರ್ಜತ್ ಜಾಮಖೇಡ್ ಶಾಸಕರಾಗಿರುವ ರೋಹಿತ್ ಜೊತೆಯಲ್ಲಿದ್ದು,ಅವರನ್ನು ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ನಲ್ಲಿರುವ ಈಡಿ ಕಚೇರಿಗೆ ಬಿಟ್ಟು ತೆರಳಿದರು.
ಅಕ್ರಮ ಸಾಲಗಳ ಮಂಜೂರಾತಿಗೆ ಸಂಬಂಧಿಸಿದ 25,000 ಕೋಟಿ ರೂ.ಗಳ ಬ್ಯಾಂಕ್ ಹಗರಣದಲ್ಲಿ ಶರದ್ ಪವಾರ್ ಮತ್ತು ಅವರ ಸಂಬಂಧಿಗಳ ವಿರುದ್ಧ ಆಗಸ್ಟ್ 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಒಂದು ತಿಂಗಳು ಮೊದಲು ಮುಂಬೈ ಉಚ್ಛ ನ್ಯಾಯಾಲಯವು ಹಗರಣದಲ್ಲಿ ಶರದ್ ಪವಾರ್, ಅವರ ಸೋದರ ಪುತ್ರ ಅಜಿತ್ ಪವಾರ್ ಮತ್ತು ಇತರ 75 ಜನರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ಪೋಲಿಸ್ ನ ಆರ್ಥಿಕ ಅಪರಾಧಗಳ ಘಟಕಕ್ಕೆ ಆದೇಶಿಸಿತ್ತು.
ಬುಧವಾರ ಈಡಿ ಕಚೇರಿಯನ್ನು ಪ್ರವೇಶಿಸುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ‘ಹಿಂದೆಯೂ ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿದ್ದೇನೆ, ಭವಿಷ್ಯದಲ್ಲಿಯೂ ಸಹಕರಿಸುತ್ತೇನೆ. ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಕೇಳಿದ್ದ ದಾಖಲೆಗಳನ್ನೆಲ್ಲ ನಾವು ಅವರಿಗೆ ಸಲ್ಲಿಸಿದ್ದೇವೆ. ಅವರ ಮುಂದೆ ಹಾಜರಾಗಿ ಅವರು ಕೇಳುವ ಮಾಹಿತಿಗಳನ್ನು ನೀಡುತ್ತೇನೆ ’ಎಂದು ಹೇಳಿದರು.
ಶರದ್ ಪವಾರ್ ಬಣದ ಎನ್ಸಿಪಿ ಕಾರ್ಯಕರ್ತರು ಈಡಿ ಕಚೇರಿಯ ಹೊರಗೆ ಪ್ರತಿಭಟನೆಗಳನ್ನು ನಡೆಸಿದ್ದು, ಅಧಿಕಾರಿಗಳು ಆವರಣದ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದರು.
ಜ.5ರಂದು ಈಡಿ ಅಧಿಕಾರಿಗಳು ಔರಂಗಾಬಾದ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ರೋಹಿತ್ ಒಡೆತನದ ಬಾರಾಮತಿ ಆಗ್ರೋ ಕಂಪನಿಯ ಆವರಣಗಳ ಮೇಲೆ ದಾಳಿಗಳನ್ನು ನಡೆಸಿದ್ದರು.