ಮಣಿಪುರ: ಹಿಂಸಾಚಾರದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರ ಹತ್ಯೆ
ಇಂಫಾಲ : ಮಣಿಪುರದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ಕನಿಷ್ಠ ಹತ್ಯೆಯಾಗಿದ್ದಾರೆ. ಬಿಷ್ಣುಪುರ ಹಾಗೂ ಚುರಾಚಾಂದ್ಪುರ ಜಿಲ್ಲೆಗಳ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ-ರೆ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಬಿಷ್ಣುಪುರದಲ್ಲಿ ಮೈತೈ ಸಮುದಾಯಕ್ಕೆ ಸೇರಿದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ ಮೊದಲ ಘಟನೆ ನಡೆದಿದೆ. ಚುರಾಚಾಂದ್ಪುರ ಜಿಲ್ಲೆಯ ಫೊಯಿಸನ್ಫೈ ಹಾಗೂ ಬಿಷ್ಣುಪುರ ಜಿಲ್ಲೆಯ ನೆರೆಯ ವಾಂಗ್ಲೈಕೈ ಪ್ರದೇಶದಲ್ಲಿ ಬೆಳಗ್ಗೆ 12.30 ಹಾಗೂ 3 ಗಂಟೆ ನಡುವೆ ಮೈತೈ ಹಾಗೂ ಕುಕಿ ಸಮುದಾಯದ ಗ್ರಾಮ ಸ್ವಯಂಸೇವಕರ ನಡುವೆ ಗುಂಡಿನ ಚಕಮಕಿ ನಡೆಯಿತು.
ಚುರಾಚಾಂದ್ಪುರ ಹಾಗೂ ಬಿಷ್ಣುಪುರ ಕಡೆಯ ಶಸಸ್ತ್ರ ಸ್ವಯಂ ಸೇವಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾದ ಇಬ್ಬರು ಗ್ರಾಮ ಸ್ವಯಂ ಸೇವಕರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಿಷ್ಣುಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಜನರು ಇಂಫಾಲ-ಚುರಾಚಾಂದ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೈತೈ ಪ್ರಾಬಲ್ಯ ಇರುವ ಫೌಗಾಕ್ಚೊ ಗ್ರಾಮದ ಮೇಲೆ ಮುಂಜಾನೆ ಸುಮಾರು 1 ಗಂಟೆಗೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಮೈತೈ ಸಮುದಾಯಕ್ಕೆ ಸೇರಿದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.