ನನ್ನ ಮೇಲಿನ ದಾಳಿಯ ಹಿಂದೆ ಮನೋಜ್ ತಿವಾರಿ ಇದ್ದಾರೆ : ಕನ್ಹಯ್ಯ ಕುಮಾರ್ ಆರೋಪ
ಹೊಸದಿಲ್ಲಿ: ನನ್ನ ಮೇಲಿನ ದಾಳಿಯ ಹಿಂದೆ ಮನೋಜ್ ತಿವಾರಿ ಇದ್ದಾರೆ. ಕ್ಷೇತ್ರದ ಜನರು ತನ್ನನ್ನು ಇನ್ನೆಂದಿಗೂ ಸ್ವೀಕರಿಸುವುದಿಲ್ಲ ಎಂದು ಹಾಲಿ ಸಂಸದ ಮನೋಜ್ ತಿವಾರಿಗೆ ಮನವರಿಕೆಯಾಗಿದೆ ಎಂದು ಶನಿವಾರ ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕನ್ಹಯ್ಯ ಕುಮಾರ್ ಆರೋಪಿಸಿದರು.
ನಿನ್ನೆ ಕೆಲವು ದುಷ್ಕರ್ಮಿಗಳು ತಮ್ಮ ಮೇಲೆ ಹಲ್ಲೆ ನಡೆಸಿ, ಮಸಿ ಎರಚಿ ದಾಳಿ ನಡೆಸಿದ ಮರುದಿನ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾದ ಬಿಜೆಪಿ ಅಭ್ಯರ್ಥಿ ವಿರುದ್ಧ ಕನ್ಹಯ್ಯ ಕುಮಾರ್ ಈ ಆರೋಪ ಮಾಡಿದ್ದಾರೆ. ಈ ಘಟನೆಯು ನ್ಯೂ ಉಸ್ಮಾನ್ ಪುರ್ ಪ್ರದೇಶದಲ್ಲಿರುವ ಆಪ್ ಕಚೇರಿಯಲ್ಲಿ ಸ್ಥಳೀಯ ಕೌನ್ಸಿಲರ್ ಆದ ಛಾಯಾ ಶರ್ಮಾರೊಂದಿಗೆ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸಿ ಕನ್ಹಯ್ಯ ಕುಮಾರ್ ಹೊರಬಂದಾಗ ನಡೆದಿತ್ತು.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್, ಮನೋಜ್ ತಿವಾರಿ ಸುಳ್ಳು ವದಂತಿಗಳು ಹಾಗೂ ತಿರುಚಿದ ವಿಡಿಯೊಗಳ ಮೂಲಕ ಜನರನ್ನು ತಮ್ಮ ವಿರುದ್ಧ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
“ತಮ್ಮ ಕೆಲಸಗಳನ್ನು ತೋರಿಸುವ ಬದಲು, ನಾನು ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದಾಗಿನಿಂದ ಸಂಸದ ಮನೋಜ್ ತಿವಾರಿ ನಿರಂತರವಾಗಿ ಸುಳ್ಳು ಹೇಳುತ್ತಾ, ತಿರುಚಿದ ವಿಡಿಯೊಗಳನ್ನು ಹಂಚುತ್ತಾ, ನನ್ನ ವಿರುದ್ಧ ಜನರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ ಕನ್ಹಯ್ಯ ಕುಮಾರ್, “ಈಶಾನ್ಯ ದಿಲ್ಲಿಯ ಹಾಲಿ ಸಂಸದರಿಗೆ ಕಳೆದ ಹತ್ತು ವರ್ಷಗಳಲ್ಲಿ ತಾವು ಕೈಗೊಂಡಿರುವ ಹತ್ತು ಯೋಜನೆಗಳನ್ನೂ ತೋರಿಸಲಾಗುತ್ತಿಲ್ಲ” ಎಂದೂ ದೂರಿದರು.
ಶುಕ್ರವಾರ ನಡೆದ ನನ್ನ ಮೇಲಿನ ದಾಳಿಗೆ ನನ್ನ ಪ್ರತಿಸ್ಪರ್ಧಿಯಾದ ಮನೋಜ್ ತಿವಾರಿ ಆದೇಶಿಸಿದ್ದಾರೆ ಎಂದು ಕನ್ಹಯ್ಯ ಕುಮಾರ್ ಪ್ರಕಟಣೆಯೊಂದರಲ್ಲಿ ಆರೋಪಿಸಿದ್ದಾರೆ.
ನನ್ನ ಬೆಳೆಯುತ್ತಿರುವ ಜನಪ್ರಿಯತೆಯಿಂದ ಮನೋಜ್ ತಿವಾರಿ ಹತಾಶರಾಗಿದ್ದು, ಹೀಗಾಗಿಯೇ ಅವರು ನನ್ನ ಮೇಲೆ ದಾಳಿ ನಡೆಸಲು ಗೂಂಡಾಗಳನ್ನು ಕಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮೇ 25ರಂದು ನಡೆಯಲಿರುವ ಆರನೆಯ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.