ನಿಗೂಢ ಚರ್ಮರೋಗ: ಐವರ ಸಾವಿನ ಬಳಿಕ ವೃದ್ಧಾಶ್ರಮವನ್ನು ಮುಚ್ಚಿದ ಕೇರಳ ಸರಕಾರ
ತಿರುನಂತಪುರ: ಕೇರಳದ ಮುವಟ್ಟುಪುಳದಲ್ಲಿ ಸ್ನೇಹಂ ಚಾರಿಟೇಬಲ್ ಆ್ಯಂಡ್ ಎಜ್ಯುಕೇಷನಲ್ ಟ್ರಸ್ಟ್ ನಡೆಸುತ್ತಿರುವ ‘ಸ್ನೇಹವೀಡು’ ಎಂಬ ವೃದ್ಧಾಶ್ರಮದಲ್ಲಿ ಕೇವಲ ಎರಡು ವಾರಗಳ ಅವಧಿಯಲ್ಲಿ ನಿಗೂಢ ಚರ್ಮರೋಗದಿಂದಾಗಿ ಐವರು ವಯಸ್ಸಾದ ಮಹಿಳೆಯರು ಮೃತಪಟ್ಟಿದ್ದಾರೆ. ಇದು ವೃದ್ಧಾಶ್ರಮದಲ್ಲಿಯ ಕಳಪೆ ಸ್ಥಿತಿಯ ಬಗ್ಗೆ ವ್ಯಾಪಕವಾದ ಆಕ್ರೋಶವನ್ನು ಹುಟ್ಟು ಹಾಕಿದೆ ಎಂದು thenewsminute.com ವರದಿ ಮಾಡಿದೆ.
ಎಲ್ಲ ಐದೂ ಮೃತರಲ್ಲಿ ಸಾವಿಗೆ ಮುನ್ನ ಒಂದೇ ರೀತಿಯ ರೋಗಲಕ್ಷಣಗಳು ಕಂಡು ಬಂದಿದ್ದವು. ಅವರ ಅಂಗಾಲುಗಳಲ್ಲಿ ಊತ ಮತ್ತು ಗುಳ್ಳೆಗಳು ಕಾಣಿಸಿಕೊಂಡಿದ್ದು, ನಂತರ ಶರೀರದ ಎಲ್ಲ ಭಾಗಗಳಿಗೂ ಹರಡಿದ್ದವು. ಅವರ ಚರ್ಮವು ಸುಲಿದು ಹೋಗುತ್ತಿತ್ತು ಮತ್ತು ಅವರು ರಕ್ತ ವಾಂತಿ ಮಾಡುತ್ತಿದ್ದರು.
ಇಂತಹ ಕೆಲವು ರೋಗಲಕ್ಷಣಗಳು ಕಂಡು ಬಂದಿರುವ ಆರು ನಿವಾಸಿಗಳನ್ನು ಮುವತ್ತುಪುಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಸದ್ಯಕ್ಕೆ ನಗರಸಭೆ ಅಧಿಕಾರಿಗಳು ಉಳಿದ ನಿವಾಸಿಗಳನ್ನು ಸುರಕ್ಷಿತ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ವೃದ್ಧಾಶ್ರಮವನ್ನು ಮುಚ್ಚಲಾಗಿದ್ದು,ಸೋಂಕು ನಿವಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸ್ನೇಹವೀಡು ನಿವಾಸಿ ಅಲಿಯಮ್ಮ ಜಾರ್ಜ್ (78) ಜು.15ರಂದು ಮೃತಪಟ್ಟ ಬಳಿಕ ಪೊಲೀಸರು ಮೊದಲ ಅನುಮಾನಾಸ್ಪದ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇಂತಹುದೇ ಸ್ಥಿತಿಯಲ್ಲಿ ಲಕ್ಷ್ಮಿಕುಟ್ಟಪ್ಪನ್ (78) ಮತ್ತು ಅಮೀನಾ ಪರೀದ್ (86) ಅವರು ಅನುಕ್ರಮವಾಗಿ ಜು.19 ಮತ್ತು 27ರಂದು ಮೃತಪಟ್ಟಿದ್ದರು. ಏಲಿ ಸ್ಕರಿಯಾ (80) ಮತ್ತು ಕಮಲಂ (72) ಜು.29ರಂದು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಎರಡನೇ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಜು.29ರಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮುವಟ್ಟುಪುಳ ಇನ್ಸ್ಪೆಕ್ಟರ್ ಬೈಜು ಪಿ.ಎಂ.ನೇತೃತ್ವದ ತಂಡವು ಅಲ್ಲಿಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.
ಮರಣೋತ್ತರ ಪರೀಕ್ಷೆ ವರದಿಗಳು ಇನ್ನಷ್ಟೇ ಬರಬೇಕಿವೆಯಾದರೂ ಮೃತರಿಂದ ಸಂಗ್ರಹಿಸಲಾದ ಕೀವು ಮಾದರಿಗಳ ಆಧಾರದಲ್ಲಿ ನಡೆಸಲಾದ ಪ್ರಾಥಮಿಕ ಪರೀಕ್ಷೆಯ ಫಲಿತಾಂಶಗಳು ಕ್ಲೆಬ್ಸಿಯೆಲ್ಲಾ ನ್ಯುಮೋನಿಯಾ ಮತ್ತು ಸ್ಟೇಫಿಲೋಕಾಕಸ್ ಆರಿಯಸ್ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳ ಉಪಸ್ಥಿತಿಯನ್ನು ಸೂಚಿಸಿವೆ. ಘಟನೆಯ ಕುರಿತು ವಿಸ್ತ್ರತ ತನಿಖೆ ನಡೆಸುವಂತೆ ಕೋರಿ ಮುವಟ್ಟುಪುಳ ಶಾಸಕ ಮ್ಯಾಥ್ಯೂ ಕುಳಂದನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ಜು.29ರಂದು ಈ ಸಾವುಗಳು ಮಾಧ್ಯಮಗಳ ಗಮನವನ್ನು ಸೆಳೆಯತೊಡಗಿದಾಗ ನಗರಸಭೆ ಅಧಿಕಾರಿಗಳು ವೃದ್ಧಾಶ್ರಮದಲ್ಲಿ ರೋಗ ಹರಡುವಿಕೆಯ ಬಗ್ಗೆ ತಮಗೆ ಮಾಹಿತಿ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಟ್ರಸ್ಟ್ ನ ಅಧ್ಯಕ್ಷ ಬಿನೀಶ ಕುಮಾರ ಅವರು,ವಾರ್ಡ್ ಕೌನ್ಸಿಲರ್ ಮತ್ತು ಮೃತರ ಬಂಧುಗಳೊಂದಿಗೆ ತಾನು ಮಾಹಿತಿಯನ್ನು ಹಂಚಿಕೊಂಡಿದ್ದಾಗಿ ಹೇಳಿದ್ದಾರೆ.
ಟ್ರಸ್ಟ್ ನಿಂದ ಸ್ನೇಹವೀಡು ನಿರ್ವಹಣೆ ಕುರಿತು ಟೀಕೆಗಳ ನಡುವೆಯೇ ನಗರಸಭೆಯು ವೃದ್ಧಾಶ್ರಮದ ಜವಾಬ್ದಾರಿಯನ್ನು ಕೊಲ್ಲಂ ಜಿಲ್ಲೆಯ ಪತ್ತನಪುರಮ್ನಲ್ಲಿರುವ ಗಾಂಧಿಭವನ ಆಶ್ರಯ ಧಾಮಕ್ಕೆ ವಹಿಸಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ವೃದ್ಧಾಶ್ರಮದ ನವೀಕರಣಕ್ಕಾಗಿ ಎಂಟು ಲ.ರೂ.ಗಳನ್ನೂ ಮಂಜೂರು ಮಾಡಲಾಗಿದೆ. ಸ್ನೇಹವೀಡು ನಿರ್ವಹಣೆಗೆ ಸಂಬಂಧಿಸಿದಂತೆ ಪುರಸಭೆಯೊಂದಿಗೆ ಟ್ರಸ್ಟ್ ನ ಒಪ್ಪಂದವು ಕಳೆದ ವರ್ಷವೇ ಅಂತ್ಯಗೊಂಡಿದ್ದು, ಅದಿನ್ನೂ ನವೀಕರಣಗೊಂಡಿಲ್ಲ.