ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪುಗಳ ಅಗತ್ಯವಿದೆ : ಪ್ರಧಾನಿ ಮೋದಿ

Update: 2024-08-31 15:30 GMT

ಪ್ರಧಾನಿ ಮೋದಿ |  PTI

ಹೊಸದಿಲ್ಲಿ : ದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲು ಅವರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪುಗಳ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ 75ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮೋದಿ, ಮಹಿಳೆಯರ ವಿರುದ್ಧ ದೌರ್ಜನ್ಯಗಳು ಮತ್ತು ಮಕ್ಕಳ ಸುರಕ್ಷತೆ ಸಮಾಜಕ್ಕೆ ಗಂಭೀರ ಕಳವಳದ ವಿಷಯವಾಗಿದೆ ಎಂದು ಬೆಟ್ಟು ಮಾಡಿದರು.

ಕೋಲ್ಕತಾದ ಸರಕಾರಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದೈಯ ಅತ್ಯಾಚಾರ ಮತ್ತು ಹತ್ಯೆ ಕುರಿತು ದೇಶವ್ಯಾಪಿ ಆಕ್ರೋಶದ ನಡುವೆಯೇ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.

‘ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸುವ ಹಲವಾರು ಕಾನೂನುಗಳಿವೆ. 2019ರಲ್ಲಿ ತ್ವರಿತ ನ್ಯಾಯಾಲಯಗಳ ಕಾನೂನನ್ನು ಅಂಗೀಕರಿಸಲಾಗಿದ್ದು, ಇದರಡಿ ಸಾಕ್ಷಿಗಳ ಹೇಳಿಕೆ ಕೇಂದ್ರಗಳನ್ನು ಸೃಷ್ಟಿಸಲಾಗಿದೆ. ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಈ ಸಮಿತಿಗಳನ್ನು ಇನ್ನಷ್ಟು ಬಲಗೊಳ್ಳುವಂತೆ ಮತ್ತು ಮಹಿಳೆಯರ ಸುರಕ್ಷತೆಯನ್ನೊಳಗೊಂಡ ಪ್ರಕರಣಗಳಲ್ಲಿ ಶೀಘ್ರ ತೀರ್ಪುಗಳು ಹೊರಬರುವಂತೆ ನಾವು ನೋಡಿಕೊಳ್ಳಬೇಕಿದೆ ’ ಎಂದು ಅವರು ಹೇಳಿದರು.

ʼಇಂದು ಮಹಿಳೆಯರ ವಿರುದ್ಧ ದೌರ್ಜನ್ಯಗಳು ಮತ್ತು ಮಕ್ಕಳ ಸುರಕ್ಷತೆ ಸಮಾಜದ ಗಂಭೀರ ಕಳವಳಗಳಾಗಿವೆ. ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿ ಹಲವು ಕಠಿಣ ಕಾನೂನುಗಳನ್ನು ತರಲಾಗಿದೆ. ಆದರೆ ನಾವು ಅವುಗಳನ್ನು ಹೆಚ್ಚು ಸಕ್ರಿಯಗೊಳಿಸಬೇಕಿದೆ. ಮಹಿಳೆಯರ ವಿರುದ್ಧ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೀರ್ಪುಗಳು ತ್ವರಿತವಾಗಿ ಹೊರಬಿದ್ದರೆ ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ಅಷ್ಟೇ ಹೆಚ್ಚಿನ ಭರವಸೆಯನ್ನು ಹೊಂದುತ್ತಾರೆ ’ಎಂದು ಹೇಳಿದರು.

ನ್ಯಾಯದಾನದಲ್ಲಿ ವಿಳಂಬವನ್ನು ನಿವಾರಿಸಲು ಮತ್ತು ನ್ಯಾಯಾಂಗ ಮೂಲಸೌಕರ್ಯವನ್ನು ಸುಧಾರಿಸಲು ಕಳೆದ 10 ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ಆರಂಭಿಸಲಾಗಿದೆ ಎಂದೂ ಪ್ರಧಾನಿ ಒತ್ತಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News