ಶಿವಮೊಗ್ಗ | ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಪ್ರಾಣಿ,ಪಕ್ಷಿಗಳು ಸೇರ್ಪಡೆ
ಶಿವಮೊಗ್ಗ: ಶಿವಮೊಗ್ಗದ ಹೊರವಲಯದಲ್ಲಿರುವ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಐದು ಬಗೆಯ ಹೊಸ ಪ್ರಾಣಿ, ಪಕ್ಷಿಗಳು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಸೇರ್ಪಡೆಯಾಗಿವೆ. ಇದರಿಂದ ತ್ಯಾವರೆಕೊಪ್ಪದಲ್ಲಿ ಪ್ರಾಣಿ ಪ್ರಬೇಧಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಹೆಚ್ಚುವರಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮೋದನೆ ದೊರತಿತ್ತು. ಅದರಂತೆ ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ಕೇರಳದ ತಿರುವನಂತಪುರದ ಮೃಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿಂದ ಹೆಚ್ಚುವರಿ ಪ್ರಾಣಿಗಳನ್ನು ತ್ಯಾವರೆಕೊಪ್ಪ ಮೃಗಾಲಯಕ್ಕೆ ತರಲಾಗಿದೆ.
ಯಾವೆಲ್ಲ ಪ್ರಾಣಿ, ಪಕ್ಷಿಗಳು ಬಂದಿವೆ:
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಘಾರಿಯಲ್ ಮೊಸಳೆಗಳು (ಒಂದ ಗಂಡು, ಒಂದು ಹೆಣ್ಣು), ನಾಲ್ಕು ಲೆಸ್ಸೆರ್ ರಿಹ ಪಕ್ಷಿಗಳು (ಎರಡು ಗಂಡು, ಎರಡು ಹೆಣ್ಣು), ಒಂದು ಗಂಡು ಕತ್ತೆ ಕಿರುಬ, ಎರಡು ಮುಳ್ಳು ಹಂದಿಗಳು (ಒಂದು ಗಂಡು, ಒಂದು ಹೆಣ್ಣು), ಸನ್ ಕನೂರು ಪಕ್ಷಿಗಳು (ಮೂರು ಗಂಡು, ಮೂರು ಹೆಣ್ಣು) ವಿನಿಮಯವಾಗಿವೆ.
ಯಾವೆಲ್ಲ ಪ್ರಾಣಿಗಳು ರವಾನೆಯಾಗಿವೆ:
ತ್ಯಾವರೆಕೊಪ್ಪದಿಂದ ತಿರುವನಂತಪುರಕ್ಕೆ ಎರಡು ಮೊಸಳೆಗಳು (ಒಂದು ಗಂಡು, ಒಂದು ಹೆಣ್ಣು), ಮೂರು ಹೆಣ್ಣು ಕತ್ತೆ ಕಿರುಬಗಳು, ಎರಡು ನರಿಗಳು (ಒಂದು ಗಂಡು, ಒಂದು ಹೆಣ್ಣು), ತಾಳೆಬೆಕ್ಕು (ಒಂದು ಗಂಡು, ಒಂದು ಹೆಣ್ಣು) ರವಾನೆ ಮಾಡಲಾಗಿದೆ.
ಯಾವೆಲ್ಲ ಪ್ರಾಣಿಗಳನ್ನು ಯಾಕೆ ತರಲಾಗಿದೆ:
ಘಾರಿಯಲ್ ಮೊಸಳೆ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ಇವುಗಳ ಸಂರಕ್ಷಣೆ ಕುರಿತು ಪ್ರಕೃತಿ ಶಿಕ್ಷಣ ನೀಡಲು ಈ ಪ್ರಭೇದವನ್ನು ತ್ಯಾವರೆಕೊಪ್ಪಕ್ಕೆ ತರಲಾಗಿದೆ. ದಕ್ಷಿಣ ಅಮೆರಿಕಕ್ಕೆ ಸಂಬಂಧಿಸಿದ ಲೆಸ್ಸೆರ್ ರಿಹಾ ಮತ್ತು ಸನ್ ಕಾನ್ಯೂರ್ ಪ್ರಭೇದಗಳು ದಕ್ಷಿಣ ಅಮೆರಿಕಕ್ಕೆ ಸಂಬಂಧಿಸಿದವು. ಇವೆರಡು ಪ್ರಬೇಧ ಇದೇ ಮೊದಲು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಬಂದಿವೆ ಎಂದು ತಿಳಿಸಲಾಗಿದೆ.
ತಿರುವನಂತಪುರದಿಂದ ಆಗಮಿಸಿರುವ ಪ್ರಾಣಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ವೈದ್ಯರು ತಿಳಿಸಿದ್ದಾರೆ. ಇದರಿಂದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಪ್ರಾಣಿ, ಪಕ್ಷಿಗಳ ಪ್ರಭೇದಗಳ ಸಂಖ್ಯೆ 30 ರಿಂದ 34ಕ್ಕೆ ಏರಿಕೆಯಾಗಿದೆ ಎಂದು ಮೃಗಾಲಯದ ಕಾರ್ಯಪಾಲಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.